ಚಿಕ್ಕಮಗಳೂರು: ಖಾಸಗಿ ಬಸ್ -ಟಿಪ್ಪರ್ ನಡುವೆ ಅಪಘಾತ; ಓರ್ವ ಮಹಿಳೆ ಮೃತ್ಯು
ಬಸ್ ಚಾಲಕ ಸೇರಿ 15 ಮಂದಿಗೆ ಗಂಭೀರ ಗಾಯ
ಎನ್.ಆರ್.ಪುರ(ಚಿಕ್ಕಮಗಳೂರು), ನ.28: ಖಾಸಗಿ ಸಾರಿಗೆ ಬಸ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್‍ನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ವರದಿಯಾಗಿದೆ.
ಎನ್.ಆರ್.ಪುರ ಪಟ್ಟಣದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಸಾರಿಗೆ ಬಸ್ ಹಾಗೂ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಗಳ ನಡುವೆ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಬಳಿ ಮುಖಾಮುಖಿ ಢಿಕ್ಕಿಯಾಗಿದ್ದು, ಈ ವೇಳೆ ಬಸ್‍ನಲ್ಲಿದ್ದ ರತ್ಮಮ್ಮ ಸೇರಿದಂತೆ 15 ಮಂದಿ ತೀವ್ರಗಾಯಗೊಂಡಿದ್ದಾರೆ. ಈ ವೇಳೆ ರತ್ನಮ್ಮ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತರಾಗಿದ್ದಾರೆನ್ನಲಾಗಿದೆ. ರತ್ನಮ್ಮ ಮುತ್ತಿನ ಸರಕಾರಿ ಆಸ್ಪತ್ರೆಯ ನರ್ಸ್ ಎಂದು ತಿಳಿದು ಬಂದಿದೆ.
ಗಾಯಗೊಂಡಿದ್ದವರ ಪೈಕಿ ಸಣ್ಣಪುಟ್ಟ ಗಾಯಗಳಾದವರನ್ನು ಎನ್.ಆರ್.ಪುರದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದರೇ, ತೀವ್ರವಾಗಿ ಗಾಯಗೊಂಡವರನ್ನು ಶಿವಮೊಗ್ಗ ನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ .
ಗಾಯಾಳುಗಳ ಪೈಕಿ ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದರೇ, ಟಿಪ್ಪರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.