ಡಾ. ಅಂಬೇಡ್ಕರ್ ಸಾವನ್ನು ಗೆದ್ದ ದಾರ್ಶನಿಕ : ಪ್ರಕಾಶ್ ಮಲ್ಪೆ
ಅಂಬೇಡ್ಕರ್ ಜೀವನ - ಸಾಧನೆ ಕುರಿತ ವಿಶೇಷ ಉಪನ್ಯಾಸ

ಮಂಗಳೂರು : ಅಂಬೇಡ್ಕರ್ ಸಾವನ್ನು ಗೆದ್ದ ದಾರ್ಶನಿಕ. ಅವರ ಜೀವನ ಹೋರಾಟವಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರ ಜೀವನದಿಂದ ಪ್ರೇರಿತರಾಗಬೇಕು ಎಂದು ಸಂವೇದನಾ ಫೌಂಡೇಶನ್ (ರಿ) ಉಡುಪಿ ಇದರ ಸಂಸ್ಥಾಪಕ ಪ್ರಕಾಶ್ ಮಲ್ಪೆ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಮತ್ತು ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಅಂಬೇಡ್ಕರ್ ಜೀವನ ಮತ್ತು ಸಾಧನೆ ಕುರಿತ ವಿಶೇಷ ಉಪನ್ಯಾಸ ಹಾಗೂ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ ಇದರ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ವಿದ್ಯಾರ್ಥಿಗಳಿಗೆ ತಿಳಿಯಬೇಕೆಂಬ ಉದ್ದೇಶದಿಂದ ಈ ಭಾಷಣ ಸ್ಪರ್ಧೆಯನ್ನು ಜಿಲ್ಲೆಯಾದ್ಯಂತ ವಿವಿಧ ಕಾಲೇಜುಗಳಲ್ಲಿ ನಡೆಸುತ್ತಿದ್ದೇವೆ ಎಂದರು. ಉಸ್ತುವಾರಿ ಪ್ರಾಂಶುಪಾಲ ಡಾ. ಹರೀಶ್ ಎ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಅಂಬೇಡ್ಕರ್ ಭಾರತದ ಶ್ರೇಷ್ಠ ವ್ಯಕ್ತಿ. ಅವರ ಕುರಿತಾಗಿ ನಡೆದ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು.
ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಿಎಸ್ಸಿಯ ಲಕ್ಷ್ಮೀಕಾಂತ್ ಪ್ರಥಮ, ತೃತಿಯ ಬಿ.ಎ ಪ್ರತೀಕ್ಷಾ ಪದ್ಯಾಣ ದ್ವಿತೀಯ ಹಾಗು ತೃತೀಯ ಬಿ.ಎ ಲತೇಶ್ ಸಾಂತ ತೃತೀಯ ಸ್ಥಾನ ಪಡೆದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾಧವ ಎಂ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಪ್ರಥಮ ಬಿ ಕಾಂನ ರವಿ ವಂದಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಸಂಯೋಜಕ ಡಾ. ಮಧು ಬಿರಾದಾರ್, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.