BJP ನಾಯಕರೊಂದಿಗೆ ಸೈಲೆಂಟ್ ಸುನೀಲ್ ಕಾರ್ಯಕ್ರಮ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ಏನು?

ಬೆಂಗಳೂರು, ನ.28: ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸಂಸದ ಪಿ.ಸಿ. ಮೋಹನ್ ಹಾಗೂ ತೇಜಸ್ವಿಸೂರ್ಯ ಅವರೊಂದಿಗೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ''ಸೈಲೆಂಟ್ ಸುನೀಲ್ ಕಾರ್ಯಕ್ರಮ ಆಯೋಜನೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ‘ಸುನಿಲನ ಬಗ್ಗೆ ಸದ್ಯ ಯಾವುದೇ ವಾರೆಂಟ್ ಇಲ್ಲ. ಆದರೂ, ವಿಚಾರ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.
''ನಿನ್ನೆ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಕಾರ್ಯಕ್ರಮ ದಲ್ಲಿ ಸೈಲೆಂಟ್ ಸುನಿಲ್ ಭಾಗವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ರೌಡಿಶೀಟರ್ಗಳ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ, ಯಾವುದೇ ರಾಜಕೀಯ ನಾಯಕರ ಒತ್ತಡ ಇಲ್ಲ'' ಎಂದು ಸ್ಪಷ್ಟಪಡಿಸಿದರು.
''ಕಾನೂನಿನಲ್ಲಿ ಯಾವ ರೀತಿ ಇದೆ ಅದ್ರಂತೆ ಮಾಡ್ತೀವಿ. ಪೊಲೀಸರು ಎಸ್ಕಾರ್ಟ್ ಮಾಡಿ ಸುನಿಲ್‍ನನ್ನು ಕರೆದುಕೊಂಡು ಹೋಗಿದ್ದ ವಿಚಾರ ಸಂಬಂಧ ಈ ಬಗ್ಗೆಯೂ ನಾವು ತನಿಖೆ ಮಾಡಲು ಸೂಚನೆ ನೀಡಲಾಗಿದೆ. ಈಗ ಸುನೀಲ್‍ನನ್ನು ಕರೆಸಿ ಮಾಹಿತಿ ಪಡೆಯುವಂತೆ ಸಿಸಿಬಿಗೂ ಸೂಚನೆ ನೀಡಲಾಗಿದೆ. ರೌಡಿಗಳ ಮೇಲೆ ನಿಗಾ ಇಡುವುದು ನಮ್ಮ ಕೆಲಸ'' ಎಂದು ತಿಳಿಸಿದರು.
ಇದನ್ನೂ ಓದಿ: ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ BJP ನಾಯಕರ ಕೈಗೆ ಸಿಕ್ಕಿದ್ದು ಹೇಗೆ?: ಕಾಂಗ್ರೆಸ್ ಪ್ರಶ್ನೆ