ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ, ವ್ಯಾಪಾರಕ್ಕೆ ಎಲ್ಲ ಧರ್ಮಿಯರಿಗೂ ಅವಕಾಶ: BJP ಶಾಸಕ ಉದಯ್ ಗರುಡಾಚಾರ್
''ಮನೆಯಲ್ಲಿ ನಾನು ಸಂಧ್ಯಾ ವಂದನೆ ಮಾಡ್ತೀನಿ, ಆಚೆ ಬಂದ್ರೆ ವಿಶ್ವಮಾನವ''
ಬೆಂಗಳೂರು, ನ.28: 'ಬೆಂಗಳೂರಿನ ವಿವಿ ಪುರಂ ಅದ್ದೂರಿ ಹಬ್ಬದಲ್ಲಿ ಎಲ್ಲ ಧರ್ಮಿಯರಿಗೂ ವ್ಯಾಪಾರ ವಾಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು' ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ (Uday B.Garudachar) ಹೇಳಿದ್ದಾರೆ.
'ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದರು' ಎಂದು ಹಿಂದುತ್ವ ಸಂಘಟನೆಗಳು ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಲ್ಲೂ ವಿವಿ ಪುರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಹೀಗಾಗಿ, ಯಾವುದೇ ವಿವಾದ ಇಲ್ಲ ಮುಕ್ತವಾಗಿ ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು. ಕೆಲವರು ಉದ್ದೇಶಪೂರ್ವಕವಾಗಿ ತರಲೆ ಮಾಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ'' ಎಂದು ವಾಗ್ದಾಳಿ ನಡೆಸಿದರು.
ನಾನು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ. ಹೀಗಾಗಿ, ಈ ಹಬ್ಬದಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಬೇಕು. ಮನೆಯಲ್ಲಿ ನಾನು ಸಂಧ್ಯಾ ವಂದನೆ ಮಾಡ್ತೀನಿ, ಆಚೆ ಬಂದ್ರೆ ನಾನು ವಿಶ್ವಮಾನವ'' ಎಂದು ಅವರು ತಿಳಿಸಿದರು.