'ಸಿನೆಮಾದಲ್ಲಿ ನಾನು ನಟಿಸುತ್ತಿಲ್ಲ, ನನಗೆ ನಟನೆ ಬರುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?
ಶಿವಮೊಗ್ಗ, ನ.29: 'ಸಿನೆಮಾದಲ್ಲಿ ನಾನು ನಟಿಸುತ್ತಿಲ್ಲ, ನನಗೆ ನಟನೆ ಬರುವುದಿಲ್ಲ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ತನ್ನ ಜೀವನ ಚರಿತ್ರೆಯನ್ನು ಬೆಳ್ಳಿಪರದೆಯಲ್ಲಿ ಬಿಚ್ಚಿಡಲು ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸಿನೆಮಾದಲ್ಲಿ ನಾನು ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
''ಗೊತ್ತಿಲ್ಲಪ್ಪಾ. ಅವರು ಕನಕಗಿರಿ ಕ್ಷೇತ್ರದಿಂದ ಬಂದಿದ್ದರು. ಅವರು ಸಿನೆಮಾ ಮಾಡುವುದಾಗಿ ಹೇಳಿದ್ದಾರಷ್ಟೇ. ಬೇರೆ ಏನೂ ಗೊತ್ತಿಲ್ಲ. ನಾನು ಆಕ್ಟಿಂಗ್ ಮಾಡಲ್ಲ. ನನಗೆ ಆಕ್ಟಿಂಗ್ ಬರುವುದಿಲ್ಲ'' ಎಂದು ಹೇಳಿದ್ದಾರೆ.
''ಅಮಿತ್ ಶಾ ಕೊಲೆ ಕೇಸ್ ನಲ್ಲಿದ್ದರು'': ಬಿಜೆಪಿಯವರು ಹೇಳೋದೊಂದು ಮಾಡುವುದೊಂದು. ನಲಪಾಡ್ ಮೇಲೆ ಒಂದು ಕೇಸ್ ಇದೆ. ಆದರೇ, ಬಿಜೆಪಿ ನಾಯಕರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಗಳಿವೆ? ಅಮಿತ್ ಶಾ ಕೊಲೆ ಕೇಸ್ ನಲ್ಲಿದ್ದರು. ಗಡಿಪಾರು ಆದೇಶದಲ್ಲಿದ್ದರು. ಬಿಜೆಪಿಗೆ ಏನು ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಚುನಾವಣೆ ಸ್ಫರ್ಧೆಗೆ ಬೇರೆ ಕ್ಷೇತ್ರಗಳಿಂದ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರೆಯುತ್ತಿದ್ದಾರೆ. ನಾನೂ ಅರ್ಜಿ ಹಾಕಿದ್ದೇನೆ. ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಅವರೇ ಹೇಳಿದ ಜಾಗದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಒಂದೇ ಕ್ಷೇತ್ರಕ್ಕೆ ಹಲವು ಜನರಿಂದ ಅರ್ಜಿ ವಿಚಾರವಾಗಿ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವುನ್ನು ಪರಿಗಣನೆ ಮಾಡಬೇಕಾಗುತ್ತದೆ. ಕೋಮುವಾದಿ ಪಕ್ಷ, ಮನುವಾದಿ ಪಕ್ಷವನ್ನು ಕಿತ್ತು ಹಾಕಬೇಕು. ಇವರಿಂದ ದೇಶ ಮತ್ತು ರಾಜ್ಯ ಉಳಿಯುವುದಿಲ್ಲ. ಇದು ನಮ್ಮ ಕಾರ್ಯಕರ್ತರ ಅಭಿಪ್ರಾಯವಾಗಿದೆ . ಟಿಕೆಟ್ ಯಾರಿಗೆ ಸಿಗುತ್ತದೆ ಸಿಗುವುದಿಲ್ಲ ಎನ್ನುವುದು ಪ್ರಶ್ನೆ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಟಿಕೆಟ್ ಕೊಟ್ಟ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು.
ಕೊಪ್ಪಳದಲ್ಲಿ ನಾನು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮದುವೆ ಸಮಾರಂಭದಲ್ಲಿ ರಾಜಕೀಯ ಮಾತನಾಡಲು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಹೆಸರು ಹೇಳಿದ್ದೆ ಅಷ್ಟೇ ಎಂದು ಹೇಳಿದರು.