ಫಿಫಾ ವಿಶ್ವಕಪ್: ನೆದರ್‌ಲ್ಯಾಂಡ್ಸ್, ಸೆನೆಗಲ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ದೋಹಾ, ನ.29: ಫಿಫಾ ವಿಶ್ವಕಪ್‌ನ ಗ್ರೂಪ್ ‘ಎ’ ಪಂದ್ಯದಲ್ಲಿ ಸೆನೆಗಲ್ ಹಾಗೂ ನೆದರ್‌ಲ್ಯಾಂಡ್ಸ್ ತಂಡಗಳು ಜಯ ದಾಖಲಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿವೆ.
ಅಲ್‌ಬೈತ್ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆದ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡ ಆತಿಥೇಯ ಖತರ್ ತಂಡವನ್ನು 2-0 ಅಂತರದಿಂದ ಮಣಿಸಿತು.
ನೆದರ್‌ಲ್ಯಾಂಡ್ಸ್ ಪರ ಕೊಡಿ ಹಾಕ್ಪೊ 26ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಹಾಕ್ಪೊ ಸತತ ಮೂರನೇ ಪಂದ್ಯದಲ್ಲಿ ಗೋಲು ಗಳಿಸಿದರು. ಫ್ರೆಂಕಿ ಡಿ ಜಾಂಗ್ 49ನೇ ನಿಮಿಷದಲ್ಲಿ ಗೋಲು ಗಳಿಸಿ ನೆದರ್‌ಲ್ಯಾಂಡ್ಸ್ ಮುನ್ನಡೆಯನ್ನು ಹೆಚ್ಚಿಸಿದರು.
ನೆದರ್‌ಲ್ಯಾಂಡ್ಸ್ ಎರಡನೇ ಗೆಲುವು ದಾಖಲಿಸಿ ಒಟ್ಟು 7 ಅಂಕದೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ. ಖತರ್ ಈಗಾಗಲೇ ಟೂರ್ನಿಯ ಸ್ಪರ್ಧೆಯಿಂದ ಹೊರ ನಡೆದಿದೆ.
ಸೆನೆಗಲ್‌ಗೆ ಜಯ
ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ನಡೆದ ಮತ್ತೊಂದು ‘ಎ‘ ಗುಂಪಿನ ಪಂದ್ಯದಲ್ಲಿ ಸೆನೆಗಲ್ ತಂಡ ಇಕ್ವೆಡಾರ್ ತಂಡವನ್ನು 2-1 ಅಂತರದಿಂದ ಮಣಿಸಿತು.
44ನೇ ನಿಮಿಷದಲ್ಲಿ ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಇಸ್ಮಾಯಿಲ್ ಸೆನೆಗಲ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 67ನೇ ನಿಮಿಷದಲ್ಲಿ ಗೋಲು ಗಳಿಸಿದ ಇಕ್ವೆಡಾರ್‌ನ ಮೊಸೆಸ್ ಕೈಸಿಡೊ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. 70ನೇ ನಿಮಿಷದಲ್ಲಿ ಗೋಲು ಗಳಿಸಿದ ಖಾಲಿದ್ ಸೆನೆಗಲ್‌ಗೆ ನಿರ್ಣಾಯಕ 2-1 ಮುನ್ನಡೆ ಒದಗಿಸಿದರು.
ಸೆನೆಗಲ್ 2ನೇ ಗೆಲುವು ದಾಖಲಿಸಿ ಒಟ್ಟು ಆರು ಅಂಕ ಗಳಿಸಿ ಮುಂದಿನ ಸುತ್ತಿಗೇರಿತು.