ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದಿಂದ ರಾಜ್ಯದ ಆರ್ಥಿಕತೆಯ ಮೇಲೆ ದೊಡ್ಡ ಪೆಟ್ಟು: ಪ್ರಿಯಾಂಕ್ ಖರ್ಗೆ
ಬೆಂಗಳೂರು, ನ.30: ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದಂತಹ ಗೋಹತ್ಯೆ ನಿಷೇಧ ಕಾಯ್ದೆಯಿಂದ ಪೊಲೀಸರು, ತಹಶೀಲ್ದಾರರು, ಕೆಲವು ಸಂಘಟನೆಗಳಿಗೆ ಲಾಭ ಆಗಿದೆಯೇ ಹೊರತು, ಚರ್ಮೋದ್ಯಮದ ಕಾರ್ಮಿಕರು, ಕೈಗಾರಿಕೆಗಳು, ರೈತರಿಗೆ ಯಾವುದೇ ಲಾಭವಾಗಿಲ್ಲ. ಜೊತೆಗೆ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಇಲಾಖೆಯು ಈ ಕಾಯ್ದೆಯಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ, ಬಿಜೆಪಿ ನಾಯಕರು ಈ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅವರಿಗೆ ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಮುಖ್ಯವಾಗಿದೆ.
ಇದನ್ನೂ ಓದಿ: ಬಿಜೆಪಿ ಶಾಲು ಹಾಕೊಂಡ್ರೆ ಎಲ್ಲಾ ಪಾಪಗಳು ಮಾಯ: ಪ್ರಿಯಾಂಕ್ ಖರ್ಗೆ ಲೇವಡಿ
ಇಡೀ ವಿಶ್ವದಲ್ಲಿ ಶೇ.13ರಷ್ಟು ಚರ್ಮ ಉತ್ಪನ್ನಗಳು ಭಾರತದಿಂದ ಉತ್ಪಾದನೆ ಆಗುತ್ತಿದ್ದವು. ಕೋವಿಡ್‍ಗೂ ಮುನ್ನ ದೇಶದ ಚರ್ಮ ವ್ಯಾಪಾರ ಉದ್ಯಮ 5.5 ಬಿಲಿಯನ್ ಡಾಲರ್ ಗಳಷ್ಟಿತ್ತು. ಚರ್ಮ ಹಾಗೂ ಪಾದರಕ್ಷೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎರಡನೇ ಸ್ಥಾನದಲ್ಲಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಹಣಕಾಸು ಸಮೀಕ್ಷೆ ಪ್ರಕಾರ, ರಾಜ್ಯದ ಚರ್ಮ ಉತ್ಪನ್ನ ರಫ್ತು 2017-18 ರಲ್ಲಿ 521.81 ಕೋಟಿ, 2018-19 562 ಕೋಟಿ, 2019-20ಯಲ್ಲಿ 502 ಕೋಟಿ, 2020-21 ಸಾಲಿನಲ್ಲಿ 160.84 ಕೋಟಿಗೆ ಕುಸಿದಿದೆ. ಈ ಉದ್ಯಮದಲ್ಲಿ 3.5 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. 91 ಕೈಗಾರಿಕೆಗಳು ರಾಜ್ಯದಲ್ಲಿದ್ದು ಇವುಗಳಲ್ಲಿ ಬಹುತೇಕ ಬಂದಾಗುವ ಹಂತಕ್ಕೆ ಬಂದಿವೆ ಎಂದು ಅವರು ಹೇಳಿದರು.
ಈ ಕಾಯ್ದೆಯಿಂದಾಗಿ ಮೊದಲ ವರ್ಷ ರಾಜ್ಯದಲ್ಲಿ 1,71,672 ಜಾನುವಾರು ನಿರ್ವಹಣೆಗೆ 464.17 ಕೋಟಿ, ಎರಡನೇ ವರ್ಷಕ್ಕೆ 3,05,337 ಜಾನುವಾರುಗಳ ನಿರ್ವಹಣೆಗೆ 170.13 ಕೋಟಿ, ಮೂರನೇ ವರ್ಷಕ್ಕೆ 4,04,269 ಜಾನುವಾರು ನಿರ್ವಹಣೆಗೆ 1032.90 ಕೋಟಿ, ನಾಲ್ಕನೇ ವರ್ಷಕ್ಕೆ 4,73,415 ಜಾನುವಾರು ನಿರ್ವಹಣೆಗೆ 1200.12 ಕೋಟಿ ಹಣ ಬೇಕಾಗುತ್ತದೆ. ಇದು ಕೇವಲ ಮೇವಿನ ಖರ್ಚು. ಗೋಶಾಲೆಗಳಲ್ಲಿ ಜಾನುವಾರು ಸಾಕಲು 3512.32 ಕೋಟಿ ಬೇಕು. ಗೋಶಾಲೆ ಮೂಲಭೂತ ಸೌಕರ್ಯಕ್ಕಾಗಿ 1208.50 ಕೋಟಿ ಬೇಕು ಎಂದು ಅವರು ಹೇಳಿದರು.
ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯದಲ್ಲಿ 27,250 ಮೆ. ಟನ್ ಗೋಮಾಂಸ ಉತ್ಪತ್ತಿ ಕಡಿಮೆ ಆಗಲಿದೆ. ಇದನ್ನು ಕುರಿ, ಮೇಕೆ ಮಾಂಸದಿಂದ ಸರದಿಗೊಳಿಸಲು 20+1ರಂತೆ ಘಟಕಗಳನ್ನು ಶೇ.50ರಷ್ಟು ಸಹಾಯ ಧನ ನೀಡಿ 76,650 ಕುರಿ ಘಟಕಗಳನ್ನು ರೈತರಿಗೆ ನೀಡಬೇಕಿದೆ. ಇದಕ್ಕೆ 519.36 ಕೋಟಿ ವೆಚ್ಚ ತಗಲುತ್ತದೆ. ಈ ಕಾಯ್ದೆಯಿಂದ ರಾಜ್ಯದ ಬೊಕ್ಕಸಕ್ಕೆ 5280 ಕೋಟಿ ನಷ್ಟ ಆಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗೋಶಾಲೆಗೆ ಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ ಶೇ.8.5ರಷ್ಟು ಕಮಿಷನ್ ನೀಡಬೇಕು ಎಂದು ಹರ್ಷ ಅಸೋಸಿಯೇಟ್ಸ್ ಪ್ರಸಕ್ತ ಸಾಲಿನ ಎ.14ರಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. 5 ಸಾವಿರ ಕೋಟಿ ನಷ್ಟ ಭರಿಸಲು ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ರಾಜ್ಯದ 177 ಗೋಶಾಲೆಯಲ್ಲಿರುವ 21,207 ಜಾನುವಾರು ಪೈಕಿ ದತ್ತು ಪಡೆಯಲಾದ ಜಾನುವಾರುಗಳು ಕೇವಲ 151 ಮಾತ್ರ. ಸಿಎಂ ತಮ್ಮ ಜನ್ಮದಿನದಂದು ದತ್ತು ತೆಗೆದುಕೊಂಡು 11 ಹಸುಗಳು ಎಲ್ಲಿದೆಯೋ ಗೊತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಸರಕಾರಿ ನೌಕರರ ಮೇಲೆ ಒತ್ತಡ ಹೇರಿ ಕಡ್ಡಾಯವಾಗಿ ಗೋವು ದತ್ತು ತೆಗೆದುಕೊಳ್ಳಲು ಆದೇಶ ನೀಡುತ್ತಿದ್ದಾರೆ. ಸರಕಾರಿ ಸಿಬ್ಬಂದಿ ವೇತನದಲ್ಲಿ ಯಾಕೆ ಹಣ ಕಡಿತ ಮಾಡುತ್ತೀರಿ, ಬಿಜೆಪಿ ಶಾಸಕರ ವೇತನದಲ್ಲಿ ಕಡಿತ ಮಾಡಿ. ಬಿಜೆಪಿ ನಾಯಕರಿಗೆ 40 ಪರ್ಸೆಂಟ್ ಕಮಿಷನ್ ಆದಾಯ ಇರುವುದರಿಂದ ಇವರು ತಿಂಗಳ ವೇತನದಲ್ಲಿ 100 ಪರ್ಸೆಂಟ್ ಮೊತ್ತ ಗೋಶಾಲೆಗೆ ದಾನ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.