ಎನ್ಡಿಟಿವಿಗೆ ರಾಜೀನಾಮೆ ನೀಡಿದ ಹಿರಿಯ ಪತ್ರಕರ್ತ ರವೀಶ್ ಕುಮಾರ್

ಹೊಸದಿಲ್ಲಿ: ಎನ್ಡಿಟಿವಿ ಮಾಲಕತ್ವ ಅದಾನಿ ಸಮೂಹದ ತೆಕ್ಕೆಗೆ ಬಿದ್ದ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿಗೆ ರಾಜೀನಾಮೆ ನೀಡಿದ್ದಾರೆ.
ಎನ್ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ವಾಹಿನಿ ಬುಧವಾರ ಆಂತರಿಕ ಇಮೇಲ್ನಲ್ಲಿ ಪ್ರಕಟಿಸಿದೆ.
ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಷ್ಕೃತ ರವೀಶ್ ಕುಮಾರ್ 'ಹಮ್ ಲೋಗ್', 'ರವೀಶ್ ಕಿ ವರದಿ', 'ದೇಶ್ ಕಿ ಬಾತ್' ಮತ್ತು 'ಪ್ರೈಮ್ ಟೈಮ್' ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ಎನ್ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾದ ಒಂದು ದಿನದ ನಂತರ ರವೀಶ್ ಕುಮಾರ್ ಅವರ ರಾಜೀನಾಮೆಯ ಬಗ್ಗೆ ಪ್ರಕಟಣೆ ಹೊರಬಿದ್ದಿದೆ.
ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಒಡೆತನದ ಆರ್ಆರ್ಪಿಆರ್ ಹೋಲ್ಡಿಂಗ್ ಕಂಪೆನಿಯು, ಸೋಮವಾರ ತನ್ನ ಈಕ್ವಿಟಿ ಬಂಡವಾಳದ 99.5 % ಅದಾನಿ ಗ್ರೂಪ್ ಒಡೆತನದ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ಗೆ (ವಿಸಿಪಿಎಲ್) ವರ್ಗಾಯಿಸಿದೆ ಎಂದು ಹೇಳಿತ್ತು. ಇದರೊಂದಿಗೆ ಎನ್ ಡಿ ಟಿ ವಿ ಮೇಲೆ ಪೂರ್ಣ ಸ್ವಾಧೀನ ಪಡೆಯುವ ಅದಾನಿ ಸಮೂಹದ ಪ್ರಯತ್ನಕ್ಕೆ ಜಯ ಸಿಕ್ಕಿತ್ತು. ಎನ್ಡಿಟಿವಿಯ ಪ್ರೊಮೋಟರ್ ಆಗಿದ್ದ ಆರ್ಆರ್ಪಿಆರ್ ಹೋಲ್ಡಿಂಗ್ ಸಂಸ್ಥೆಯು ಷೇರುಗಳ ವರ್ಗಾವಣೆ ಮಾಡಿರುವುದರಿಂದ ಅದಾನಿ ಸಮೂಹಕ್ಕೆ NDTV ಯಲ್ಲಿ 29.18 ರಷ್ಟು ಪಾಲು ಸಿಕ್ಕಿತ್ತು.