ಮೂಡಿಗೆರೆ: ಹೆಡದಾಳು ಗ್ರಾಮದಲ್ಲಿ ಬೀಡು ಬಿಟ್ಟ 3 ಕಾಡಾನೆಗಳು; ಗ್ರಾಮಸ್ಥರಲ್ಲಿ ಆತಂಕ
ಮುಂದುವರಿದ ಕಾಡಾನೆಗಳ ಸೆರೆ ಕಾರ್ಯಾಚರಣೆ
ಚಿಕ್ಕಮಗಳೂರು, ಡಿ.1: ಜಿಲ್ಲೆಯ ಮೂಡಿಗೆರೆ (Mudigere) ಭಾಗದಲ್ಲಿ ಪುಂಡಾಟ ಮೆರೆಯುತ್ತಿದ್ದ ಕಾಡಾನೆಗಳ ಸೆರೆ ಕಾರ್ಯಾಚರಣೆ ಮುಂದುವರಿದಿದ್ದು, ಈ ಮಧ್ಯೆ ಆಲ್ದೂರು ಸಮೀಪದ ಹೆಡದಾಳ್ ಗ್ರಾಮದಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿವೆ.
ಮೂಡಿಗೆರೆ ತಾಲೂಕಿನಲ್ಲಿ 3 ಕಾಡಾನೆಗಳು ತೋಟದಲ್ಲಿ ಠಿಕಾಣಿ ಹೂಡಿದ್ದು, ಎರಡು ದಿನಗಳ ಹಿಂದೆ ಮರಿಯಾನೆಯೊಂದನ್ನು ಕುಂದೂರು ಎಸ್ಟೇಟ್ ಸಮೀಪ ಸೆರೆ ಹಿಡಿಯಲಾಗಿದೆ. ಮರಿಯಾನೆಯನ್ನು ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲು ಆನೆ ಬಿಡಾರಕ್ಕೆ ಬಿಡಲಾಗಿದೆ. ಒಂದು ಕಾಡಾನೆಯ ಸೆರೆ ಬಳಿಕ ಕಾರ್ಯಾಚರಣೆಗೆ ಬಂದಿದ್ದ ಆನೆಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮತ್ತೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
ಆಲ್ದೂರು ವಲಯದ ಹೆಡದಾಳ್ ಗ್ರಾಮದಲ್ಲಿ ಮೂರು ಕಾಡಾನೆಗಳು ಗುರುವಾರ ಪ್ರತ್ಯಕ್ಷವಾಗಿದ್ದು, ಈ ಭಾಗದ ಗ್ರಾಮೀಣ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಂದ್ರೇಗೌಡ ಎಂಬವರ ತೋಟದಲ್ಲಿ ಎರಡು ಆನೆಗಳು ಹಾಗೂ ಹುಣಸೆಮಕ್ಕಿ ನಾರಾಯಣಗೌಡ ಎಂಬವರ ತೋಟದಲ್ಲಿ ಮತ್ತೊಂದು ಆನೆ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಮೂಡಿಗೆರೆ ಭಾಗದಲ್ಲಿ ಉಪಟಳ ಮಾಡುತ್ತಿರುವ 3 ಕಾಡಾನೆಗಳ ಸೆರೆಗೆ ಸರಕಾರ ಆದೇಶ
ಗುರುವಾರ ಹೆಡದಾಳ್ ಗ್ರಾಮದ ಕೆರೆಯ ಬಳಿ ಇದ್ದ ಕಾಡಾನೆಗಳು ಸಂಜೆಯಾಗುತ್ತಿದ್ದಂತೆ ತೋಟ ಸೇರಿಕೊಂಡಿವೆ. ಹೆಡೆದಾಳ್, ಮಾವಿನಗುಣಿ, ಹುಣಸೆಮಕ್ಕಿ ಮಾರ್ಗದಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಕೂಲಿ ಕೆಲಸಕ್ಕೆ ತೆರಳದಂತೆ, ರಾತ್ರಿವೇಳೆ ಮನೆಯಿಂದ ಹೊರಬಾರದಂತೆ ಧ್ವನಿವರ್ಧಕದಲ್ಲಿ ಗ್ರಾಮಸ್ಥರನ್ನು ಎಚ್ಚರಿಸಲಾಗುತ್ತಿದೆ.
ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಡಾನೆ ಹಾವಳಿಯಿಂದ ಕೂಲಿ ಕಾರ್ಮಿಕರು ಕಾಫಿಹಣ್ಣು ಕೊಯ್ಲು ವೇಳೆಯಲ್ಲಿ ಮನೆಯಲ್ಲಿ ಇರುವಂತಾಗಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವ ಮೂಲಕ ನೆಮ್ಮದಿ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.