ಉಡುಪಿ ಜಿಲ್ಲಾ ರಜತೋತ್ಸವ: ಡಿ. 3-4ರಂದು ವಿಚಾರ ಸಂಕಿರಣ

ಉಡುಪಿ, ಡಿ.1: ಉಡುಪಿ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಜಿಲ್ಲೆಯ ಕಳೆದ 25 ವರ್ಷಗಳ ಸಾಧನೆಯನ್ನು ನೆನಪಿಸಿಕೊಂಡು, ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಾಗಿರುವ ಹೊಸ ಯೋಜನೆಗಳ ರೂಪುರೇಷೆಯನ್ನು ಹಾಕಿಕೊಳ್ಳಲು ವಿವಿಧ ವಿಷಯಗಳ ತಜ್ಞರು, ಗಣ್ಯರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ‘ದಿಕ್ಸೂಚಿ.... ಸುವರ್ಣ ಉಡುಪಿಗೆ ರಜತ ಉಡುಪಿಯ ಪರಿಕಲ್ಪನೆ’ ಎಂಬ ಎರಡು ದಿನಗಳ ವಿಚಾರ ಸಂಕಿರಣವನ್ನು ಡಿ.3 ಮತ್ತು 4ರಂದು ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾ ಡುತ್ತಿದ್ದರು. ಎರಡು ದಿನಗಳಲ್ಲಿ ನಡೆಯುವ ಐದು ವಿಚಾರಗೋಷ್ಠಿಗಳಲ್ಲಿ ಮಂಡನೆಯಾಗುವ ವಿಷಯಗಳು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಮುಂದಿನ ಯೋಜನೆಗಳಿಗೆ ದಾಖಲೀಕರಣ ಮಾಡಲಾಗುವುದು ಎಂದವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶಿಕ್ಷಣ ತಜ್ಞರು, ಕೈಗಾರಿ ಕೋದ್ಯಮಿಗಳು, ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿದವರು, ಕೃಷಿ, ಮತ್ಸ್ಯೋದ್ಯಮ ಮತ್ತು ಪ್ರವಾಸೋದ್ಯಮಿ ಗಳನ್ನು ಸಹ ವಿಚಾರಸಂಕಿರಣಕ್ಕೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೊದಲ ದಿನ 12ಗಂಟೆಗೆ ಆರೋಗ್ಯ ಮತ್ತು ಶಿಕ್ಷಣ, ಅಪರಾಹ್ನ 3:00ಕ್ಕೆ ಪ್ರವಾಸೋದ್ಯಮ ಹಾಗೂ ಸ್ವಾಸ್ಥ್ಯ ಹಾಗೂ ಪರಿಸರ ವಿಷಯದ ಮೇಲೆ ವಿಚಾರ ಸಂಕಿರಣ ನಡೆದರೆ ಎರಡನೇ ದಿನ ಬೆಳಗ್ಗೆ 9ಕ್ಕೆ ಉದ್ಯಮ, ಬಂಡವಾಳ ಮತ್ತು ಮೂ ಸೌಕರ್ಯ, ಅಪರಾಹ್ನ 12ಕ್ಕೆ ಬ್ಯಾಂಕಿಂಗ್ ಮತ್ತು ಸ್ಟಾರ್ಟ್‌ಅಪ್ ಹಾಗೂ 3:00ಕ್ಕೆ ಕೃಷಿ, ಮೀನುಗಾರಿಕೆ ಹಾಗೂ ಕೃಷಿ ಸಂಬಂಧಿತ ವಿಷಯಗಳನ್ನು ವಿಚಾರಸಂಕಿರಣ ಒಳಗೊಂಡಿರುತ್ತದೆ ಎಂದರು.
ವಿಚಾರ ಸಂಕಿರಣವನ್ನು ಡಿ.3ರ ಬೆಳಗ್ಗೆ 9 ಗಂಟೆಗೆ ರಾಜ್ಯ ಮೀನುುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದು, ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್‌ಕುಮಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ತಜ್ಞರು ಪಾಲ್ಗೊಳ್ಳಲಿದ್ದಾರೆ. ಪತ್ರಿಕಾಗೋಷ್ಠಿ ಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಎಡಿಸಿ ವೀಣಾ ಉಪಸ್ಥಿತರಿದ್ದರು.







