JDS ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮ ಅಲ್ಲ, ಪ್ರತಿ ದಿನ ಬದಲಾವಣೆ ಆಗುತ್ತಿದೆ: ಎಚ್.ಡಿ.ದೇವೇಗೌಡ
ಮೈಸೂರು,ಡಿ.1: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ, ಪ್ರತಿ ದಿನ ಪಟ್ಟಿ ಬದಲಾವಣೆ ಆಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ತೆರಳಲು ಗುರುವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
''ಪ್ರತಿ ದಿನ ಅಭ್ಯರ್ಥಿಗಳ ಪಟ್ಟಿ ಬದಲಾವಣೆ ಆಗುತ್ತಿದೆ. ಪ್ರತಿ ದಿನ ಸಮೀಕ್ಷೆಯೂ ನಡೆಯುತ್ತಿದೆ. ಅದನ್ನು ಆಧರಿಸಿ ನಿರ್ಧಾರ ಮಾಡಲಾಗುತ್ತದೆ'' ಎಂದು ಹೇಳಿದರು.
''ಈಗಾಗಲೇ ಪಕ್ಷದಿಂದ ಅಂತರ ಕಾಯ್ದುಕೊಂಡವರ ಜೊತೆ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಶಾಸಕ ಶಿವಲಿಂಗೇಗೌಡರು ಕುಮಾರಸ್ವಾಮಿ ಜೊತೆ ಮಾತನಾಡಿದ್ದಾರೆ. ಸ್ವಲ್ಪ ಧ್ವಂದ ಇದೆ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ'' ಎಂದು ಹೇಳಿದರು.
''ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮುಂದಿನ ತಿಂಗಳಿನಿಂದ ಪ್ರಚಾರಕ್ಕೆ ಹೋಗುತ್ತೇನೆ. ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಪಂಚರತ್ನ ಯಾತ್ರೆಯಲ್ಲಿ ತೊಡಗಿದ್ದಾರೆ. ಯಾತ್ರೆ ಸಾಗುವ ಹಳ್ಳಿಗಳಲ್ಲಿ ನಮ್ಮ ಪಕ್ಷದ ಶಾಸಕರು, ಮುಖಂಡರುಗಳು, ಮಾಜಿ ಶಾಸಕರು ಒಂದೊಂದು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮನೆ ಮನೆಗೆ ತೆರಳಿ ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ'' ಎಂದು ತಿಳಿಸಿದರು.
''ಹಾಸನದಲ್ಲಿ ಶಾಸಕ ಪ್ರೀತಂ ಗೌಡರಿಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರವಿದ್ದಾಗ ಸರ್ವ ಶಕ್ತಿ ಕೊಟ್ಟಿದೆ. ಯಾವ್ಯಾವ ಕೆಲಸ ಕೊಟ್ಟಿದ್ದಾರೆ ಅದರಿಂದ ಎಷ್ಟು ಹಣ ಸಂಪಾದಿಸಿದ್ದಾರೆ ಅವರ ಶಕ್ತಿಗೆ ಯಡಿಯೂರಪ್ಪ ಹಾಗೂ ಅವರ ಮಕ್ಕಳೇ ಕಾರಣ. ಅವರಾರ ಹೆದರಿಕೆಗೂ ನಾವು ಬಗ್ಗುವುದಿಲ್ಲ'' ಎಂದು ಗುಡುಗಿದರು.
''ಹಾಸನ ಟಿಕೆಟ್‍ಗೆ ಪಕ್ಷದಲ್ಲಿ ಬಹಳ ಮಂದಿ ಆಕಾಂಕ್ಷಿಗಳಿದ್ದಾರೆ. ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಾರೆ ಎಂದರು. ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ'' ಎಂದು ಹೇಳಿದರು.