ಸ್ಕಾಟ್‌ಲ್ಯಾಂಡ್‌ನಿಂದ ಗಿಫ್ಟ್ ಕಳುಹಿಸಿದಾಗಿ ನಂಬಿಸಿ ಉಡುಪಿಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಉಡುಪಿ: ಇನ್ಸ್ಟಾಗ್ರಾಮ್ (Instagram) ಮೂಲಕ ಸ್ನೇಹಿತನಾಗಿ ಸ್ಕಾಟ್‌ಲ್ಯಾಂಡ್ ನಿಂದ ಕೋರಿಯರ್ ಮೂಲಕ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಉಡುಪಿಯ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ನೊಂದ ಮಹಿಳೆಯನ್ನು ಲೆನಾರ್ಡ್ ಹಾಂಕ್ಸ್ ಎಂಬ ವ್ಯಕ್ತಿ ತಾನು ಸ್ಕಾಟ್‌ಲ್ಯಾಂಡ್‌ನ ವೈದ್ಯ ಎಂಬುದಾಗಿ ಪರಿಚಯಿಸಿ ಕೊಂಡಿದ್ದು, ನಂತರ ವಾಟ್ಸ್‌ಅಪ್ ಮೂಲಕ ಇವರಿಬ್ಬರು ಚಾಟಿಂಗ್ ನಡೆಸಿ, ಸ್ನೇಹಿತರಾಗಿದ್ದರು. ನವೆಂಬರ್ ಮೊದಲ ವಾರದಲ್ಲಿ ಕೋರಿಯರ್ ಪಾರ್ಸೆಲ್ ಮೂಲಕ ಗಿಫ್ಟ್ ಕಳುಹಿಸಿದಾಗಿ ಆತ ಆಕೆಯನ್ನು ನಂಬಿಸಿದ್ದನು.
ಬಳಿಕ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೊರಿಯರ್ ಕಚೇರಿ ಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಸ್ಕಾಟ್‌ಲ್ಯಾಂಡ್‌ನಿಂದ ಬಂದಿರುವ ಪಾರ್ಸೆಲ್‌ಗೆ ಪಾರ್ಸೆಲ್ ಶುಲ್ಕ, ಆದಾಯ ತೆರಿಗೆ ಮತ್ತು ಪೌಂಡ್ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದು, ಅದನ್ನು ನಂಬಿದ ಮಹಿಳೆ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 6,91,000ರೂ. ಹಣವನ್ನು ಪಾವತಿಸಿದರೆಂದು ತಿಳಿದುಬಂದಿದೆ. ಆದರೆ ಆರೋಪಿಗಳು ಗಿಫ್ಟ್ ಕಳುಹಿಸಿಕೊಡದೆ ಪಾವತಿಸಿದ ಹಣವನ್ನು ವಾಪಾಸ್ಸು ಕೊಡದೆ ವಂಚಿಸಿರುವುದಾಗಿ ದೂರಲಾಗಿದೆ.







