ಕಲಾತಪಸ್ವಿ ಕುಂಬ್ಳೆ ಸುಂದರ ರಾಯರಿಗೆ ಶ್ರದ್ಧಾಂಜಲಿ

ಉಡುಪಿ: ಆರು ದಶಕಗಳ ಕಾಲ ತಮ್ಮ ಮಾತಿನ ಮೋಡಿಯಿಂದ ಯಕ್ಷರಂಗವನ್ನು ಆಳಿದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾಯರಿಗೆ ನಾಗರಿಕ ಶ್ರದ್ಧಾಂಜಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ಸಂಜೆ ನಡೆಯಿತು.
ಪ್ರಸಂಗಕರ್ತ ಹಾಗೂ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಿ.ಎಸ್ ಶ್ರೀಧರ್ ಕುಂಬಳೆಯವರ ಮಾತಿನ ಪ್ರೌಢಿಮೆಯನ್ನು ಯಕ್ಷಗಾನ ಬಯಲಾಟ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಪಾರ್ತಿಸುಬ್ಬ ಪ್ರಶಸ್ತಿಯ ಸ್ಥಾಪನೆಯ ಕುರಿತು ಮಾತನಾಡಿದರು.
ಕುಂಬ್ಳೆ ಅವರ ಸಹಕಲಾವಿದ ತಾರಾನಾಥ ವರ್ಕಾಡಿ, ಮಾತಿನಿಂದಲೇ ಪಾತ್ರ ಗಳನ್ನು ಕಟ್ಟಿಕೊಡುತ್ತಿದ್ದ ಪರಿಯನ್ನು ನೆನಪಿಸಿಕೊಂಡರು. ಕಿಲ್ಲೆಯವರು ಆರಂಭಿಸಿದ ಪ್ರಾಸಬದ್ಧ ಮಾತುಗಾರಿಕೆಯ ನಡೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದರು ಎಂದು ಅಭಿಪ್ರಾಯಪಟ್ಟರು.
ಹಿರಿಯ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾವ್ ಮಾತನಾಡಿ ಅವರು ರಂಗದಲ್ಲಿ ಸಹಕಲಾವಿದನನ್ನು ಉತ್ತೇಜಿಸುತ್ತಾ ಪ್ರಸಂಗವನ್ನು ಸುಂದರವಾಗಿ ಕೊಂಡು ಹೋಗುತ್ತಿದ್ದುದನ್ನು ಸ್ಮರಿಸಿಕೊಂಡರು. ಸಂಸ್ಕಾರ ಭಾರತಿಯ ವಾಸುದೇವ ಭಟ್ ಪೆರಂಪಳ್ಳಿ ಅವರೂ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯ ದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.







