ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಸ್ಟೀವನ್ ಸ್ಮಿತ್
29ನೇ ಟೆಸ್ಟ್ ಶತಕ ಸಿಡಿಸಿದ ಆಸ್ಟ್ರೇಲಿಯದ ಮಾಜಿ ನಾಯಕ

ಪರ್ತ್, ಡಿ.1: ಮಾಜಿ ನಾಯಕ ಹಾಗೂ ಬ್ಯಾಟಿಂಗ್ ಮಾಂತ್ರಿಕ ಸ್ಟೀವನ್ ಸ್ಮಿತ್ ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ದಿನವಾದ ಗುರುವಾರ 29ನೇ ಶತಕವನ್ನು ಸಿಡಿಸಿ ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಸಾಧನೆಯ ಮೂಲಕ ಸ್ಮಿತ್ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ತಾನಾಡಿದ 88ನೇ ಪಂದ್ಯದಲ್ಲಿ ಸ್ಮಿತ್ ಈ ಮೈಲಿಗಲ್ಲು ತಲುಪಿದ್ದಾರೆ. ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್ 1948ರ ಜುಲೈನಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿರುವ ತನ್ನ 51ನೇ ಟೆಸ್ಟ್ ಪಂದ್ಯದಲ್ಲಿ 29ನೇ ಶತಕವನ್ನು ಸಿಡಿಸಿದ್ದರು.
ರಿಕಿ ಪಾಂಟಿಂಗ್(41), ಸ್ಟೀವ್ ವಾ(32) ಹಾಗೂ ಮ್ಯಾಥ್ಯೂ ಹೇಡನ್(30)ಮಾತ್ರ ಆಸ್ಟ್ರೇಲಿಯದ ಪರ ಗರಿಷ್ಠ ಶತಕಗಳನ್ನು ಗಳಿಸಿದ್ದಾರೆ.
ವಿಂಡೀಸ್ ವಿರುದ್ಧ ಪಂದ್ಯದಲ್ಲಿ 179 ಎಸೆತಗಳನ್ನು ಎದುರಿಸಿದ್ದ ಸ್ಮಿತ್ ಕೇವಲ 9
ಬೌಂಡರಿ ಸಿಡಿಸಿದ್ದರು. ಈ ವರ್ಷದ ಜುಲೈನಲ್ಲಿ ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧ ಔಟಾಗದೆ 145 ರನ್ ಗಳಿಸಿದ್ದ ಸ್ಮಿತ್ ಇದೀಗ 3 ಇನಿಂಗ್ಸ್ ಅಂತರದಲ್ಲಿ ಎರಡನೇ ಶತಕ ಗಳಿಸಿದ್ದಾರೆ.
ಸ್ಮಿತ್ ಈಗಿನ ತಲೆಮಾರಿನ ಶ್ರೇಷ್ಠ ಬ್ಯಾಟರ್ ಪೈಕಿ ಒಬ್ಬರಾಗಿದ್ದಾರೆ. ಭಾರತದ ವಿರಾಟ್ ಕೊಹ್ಲಿ, ನ್ಯೂಝಿಲ್ಯಾಂಡ್ನ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಂಡ್ ನ ಜೋ ರೂಟ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಕೊಹ್ಲಿ 102 ಟೆಸ್ಟ್ ಪಂದ್ಯಗಳಲ್ಲಿ 27 ಶತಕಗಳನ್ನು ಸಿಡಿಸಿದರೆ, ವಿಲಿಯಮ್ಸನ್
88 ಟೆಸ್ಟ್ ಗಳಲ್ಲಿ 24 ಶತಕ ಹಾಗೂ ರೂಟ್ 125 ಟೆಸ್ಟ್ ಪಂದ್ಯಗಳಲ್ಲಿ 28 ಶತಕಗಳನ್ನು ಸಿಡಿಸಿದ್ದಾರೆ.