ಕೋರ್ಟ್ ಆವರಣಗಳಲ್ಲಿ ವಾಹನಗಳ ನಿಲುಗಡೆ ನಿಗಾ ವಹಿಸಿ: ಹೈಕೋರ್ಟ್ ರಿಜಿಸ್ಟ್ರಾರ್ ಗೆ ಮನವಿ
ಬೆಂಗಳೂರು, ಡಿ.1: ಹೈಕೋರ್ಟ್ ಸೇರಿ ಬೆಂಗಳೂರಿನ ನ್ಯಾಯಾಲಯಗಳ ಆವರಣಗಳಲ್ಲಿ ವಕೀಲರ ವಾಹನಗಳಿಗೆ ಮಾತ್ರವಲ್ಲದೆ ಕೋರ್ಟ್ಗೆ ಭೇಟಿ ನೀಡುವ ಕಕ್ಷಿದಾರರ, ಸಾರ್ವಜನಿಕರ ವಾಹನಗಳ ನಿಲುಗಡೆಯಲ್ಲಿ ಯಾವುದೇ ರೀತಿ ಅಡೆತಡೆಗಳಾಗದಂತೆ ನಿಗಾ ವಹಿಸುವ ಕಾರ್ಯವನ್ನು ಅನುಷ್ಠಾನಗೊಳಿಸಬೇಕೆಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನೈಜ ಹೋರಾಟಗಾರರ ವೇದಿಕೆಯು ಮನವಿ ಪತ್ರವನ್ನು ಸಲ್ಲಿಸಿದೆ.
2023ರ ಜ.1ರಿಂದ ಕೋರ್ಟ್ಗೆ ಆಗಮಿಸುವ ಕಕ್ಷಿದಾರರ ವಾಹನಗಳನ್ನು ನಿರ್ಬಂಧಿಸುವ ವಕೀಲರ ಸಂಘದ ನಡೆ ಕಕ್ಷಿದಾರರನ್ನು ನ್ಯಾಯಾಲಯದ ಆವರಣದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿರುವುದು ಆಘಾತಕಾರಿ ಎಂದು ವೇದಿಕೆಯ ಮುಖಂಡ ಹೆಚ್.ಎಂ.ವೆಂಕಟೇಶ್ ಮನವಿಯಲ್ಲಿ ತಿಳಿಸಿದ್ದಾರೆ.
ಕೋರ್ಟ್ ಆವರಣಕ್ಕೆ ಸುಲಭವಾಗಿ ಮತ್ತು ಮುಕ್ತ ವಾತಾವರಣದಲ್ಲಿ ಕಕ್ಷಿದಾರರು, ಸಾರ್ವಜನಿಕರು ಬಂದು ತಮ್ಮ ವಾಹನವನ್ನು ನಿಲುಗಡೆ ಮಾಡಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿದ ನಂತರ ವಾಪಾಸ್ ಹೋಗುವ ಪದ್ಧತಿ ಈವರೆಗೆ ಸರಿಯಾಗಿಯೇ ಇತ್ತು. ಇದನ್ನೇ ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಅವಶ್ಯಕತೆ ಈಗ ಬಂದಿದೆ ಎಂದು ವೇದಿಕೆಯು ಹೇಳಿದೆ.