ಮದ್ದೂರು: ಮೂವರು ಪುಟ್ಟ ಮಕ್ಕಳನ್ನು ಸಾಯಿಸಿ ತಾಯಿ ಆತ್ಮಹತ್ಯೆ
ಮಂಡ್ಯ, ಡಿ.2: ಮೂವರು ಪುಟ್ಟ ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ತಾಯಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮದ್ದೂರು ಪಟ್ಟಣದ ಹೊಳೆಬೀದಿಯಲ್ಲಿ ಗುರುವಾರ ಸಂಜೆ ನಡೆದಿರವುದು ವರದಿಯಾಗಿದೆ.
ಹೊಳೆ ಬೀದಿ ನಿವಾಸಿ, ಕಾರು ಮೈಕಾನಿಕ್ ಅಕಿಲ್ ಅಹ್ಮದ್ ಎಂಬವರ ಪತ್ನಿ ಉಸ್ಮಾ ಕೌಸರ್ (32) ಮತ್ತು ಮೂವರು ಮಕ್ಕಳಾದ ಪುತ್ರ ಹಾರಿಸ್(8), ಪುತ್ರಿಯರಾದ ಅಲಿಝಾ(4), ಅನಮ್ ಫಾತಿಮಾ (2) ಮೃತಪಟ್ಟವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಹೊಳೆಬೀದಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಈ ಕುಟುಂಬದಲ್ಲಿ ಇತ್ತೀಚೆಗೆ ವಿರಸ ಏರ್ಪಟ್ಟಿತ್ತು. ದಂಪತಿಗೆ ಹಿರಿಯರು ಬುದ್ದಿಮಾತು ಹೇಳಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪತಿ ಮನೆಯಲ್ಲಿ ಇರದ ವೇಳೆ ಉಸ್ಮಾ ಕೌಸರ್ ಮಕ್ಕಳಿಗೆ ವಿಷವುಣಿಸಿ ಬಳಿಕ ಆಕೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಮೃತಳ ತಾಯಿ ತಡರಾತ್ರಿ ಮಗಳ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿದ್ದಾರೆ.