ಕಾನುನುಬದ್ಧ ಮರಳುಗಾರಿಕೆ | 2 ದಿನಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಅನುಮತಿ ಆದೇಶ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಡಿ.2: ದ.ಕ. ಜಿಲ್ಲೆಯಲ್ಲಿ ಸಿಆರ್‌ಝೆಡ್ ಹಾಗೂ ಸಿಆರ್‌ಝೆಡೇತರ ವಲಯದಲ್ಲಿ ಕಾನೂನುಬದ್ಧವಾಗಿ ಮರಳುಗಾರಿಕೆ ನಡೆಸುವುದಕ್ಕಾಗಿ ಅರ್ಹ ಗುತ್ತಿಗೆದಾರರಿಗೆ ಒಂದೆರಡು ದಿನಗಳಲ್ಲಿ ಅನುಮತಿ ಆದೇಶ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಯಡಿ 142 ಮಂದಿಯ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಉಳಿದಂತೆ ಇತರ 52 ಮಂದಿಯ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಮರಳುಗಾರಿಕೆಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಸಿಆರ್‌ಝೆಡೇತರ ವಲಯದಲ್ಲಿ 18 ಕಡೆ ಮರಳು ದಿಬ್ಬಗಳನ್ನು ಗುರುತಿಸಿ ಟೆಂಡರ್ ಆಗಿದೆ. ಪ್ರಕ್ರಿಯೆ ಜಾರಿಯಲ್ಲಿದೆ. ಇಲ್ಲಿ 10 ಲಕ್ಷ ಮೆಟ್ರಿಕ್ ಟನ್ ಮರಳನ್ನು ಗುರುತಿಸಲಾಗಿದೆ. ಇನ್ನುಳಿದಂತೆ ಗುರುತಿಸಲಾಗಿರುವ ಇತರ 17 ಮರಳು ದಿಬ್ಬಗಳಿಗೆ ಪರಿಸರ ಅನುಮತಿ (ಇಸಿ)ಯನ್ನು ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಹೊರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟದ ಆರೋಪದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಖುದ್ದು ರಾತ್ರಿ ಭೇಟಿ ನೀಡಿ ಕೇರಳದ ಗಡಿಯಲ್ಲಿ ನಿಂತು ಪರಿಶೀಲನೆಯನ್ನೂ ಮಾಡಿದ್ದೇನೆ. ನಾನು ಭೇಟಿ ನೀಡಿದ್ದ ಸಂದರ್ಭದಲ್ಲೇ ಮೂರು ಲಾರಿಗಳಲ್ಲಿ ಮರಳು ಸಾಗಾಟವಾವುದನ್ನು ಕಂಡಿದ್ದೇನೆ. ಇದು ಅಕ್ರಮ ಸಕ್ರಮವೇ ಎಂಬ ಬಗ್ಗೆ ಪರಿಶೀಲಿಸಲಾಗಿಲ್ಲ. ಮಾತ್ರವಲ್ಲದೆ ನಮ್ಮ ಜಿಲ್ಲೆಯ ಮರಳನ್ನು ನಮ್ಮ ಜಿಲ್ಲೆಯ ಬಳಕೆಗೆ ಬಳಸಬೇಕಾಗಿದೆ. ಒಂದೊಮ್ಮೆ ಮರಳುಗಾರಿಕೆ ಕಾನೂನುಬದ್ಧವಾಗಿ ಜಿಲ್ಲಾದ್ಯಂತ ನಡೆದಾಗ ಅಕ್ರಮವಾಗಿ ಸಾಗಾಟವಾಗಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ
ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಆಕ್ಷೇಪಣೆ, ದೂರುಗಳಿಗೆ ಅವಕಾಶವಿರುವುದಿಲ್ಲ. ಹಾಗಾಗಿ ಡಿ. 8ರೊಳಗೆ ಎಲ್ಲಾ ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಬೇಕು. ಇಲ್ಲವಾದಲ್ಲಿ ಅಥವಾ ತಿದ್ದುಪಡಿ ಅಥವಾ ಆಕ್ಷೇಪ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬಿಎಲ್‌ಒಗಳ (ಮತಗಟ್ಟೆ ಅಧಿಕಾರಿಗಳು) ಮೂಲಕ ಸಲ್ಲಿಸಬಹುದು. ವೆಬ್‌ಪೋರ್ಟಲ್ ceokarnataka.kar.nic.in, nvsp.in, dk.nic.inನಲ್ಲಿಯೂ ಮತದಾರರು ಪರಿಶೀಲನೆ ನಡೆಸಬಹುದು. ಮತದಾರರ ಜಿಲ್ಲಾ ಸಹಾಯವಾಣಿ 1950ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು