ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್- 2 ಟೆಂಡರ್‌ನಲ್ಲಿ ಭ್ರಷ್ಟಾಚಾರ: ಜೆ.ಆರ್.ಲೋಬೋ ಆರೋಪ
ಅಧಿಕಾರಿಗಳ ವಿರುದ್ಧ ಮಾಜಿ ಶಾಸಕ ಅಸಮಾಧಾನ

ಮಂಗಳೂರು, ಡಿ.2: ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್- 2 ಟೆಂಡರ್‌ನಲ್ಲಿ ಭ್ರಷ್ಟಾಚಾರ ಆಗಿರುವ ಸಂಶಯ ಬಲವಾಗಿದೆ. ಸುಮಾರು 32 ಕೋಟಿ ರೂ.ಗಳ ಈ ಯೋಜನೆಯಡಿ ಅಮೆರಿಕ, ಇಂಗ್ಲೆಂಡ್‌ನಲ್ಲಿ ನಿಷೇಧ ಆಗಿರುವ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯ ಚೀನಾ ಕಂಪನಿಗೆ ನೀಡುವುದಾಗಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅವರೇ ತಲೆದಂಡವಾಗಲಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳ ಮಾತು ಕೇಳಿ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ ಮುಂದೆ ಅಧಿಕಾರಿಗಳು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.
ಇದು ದೇಶದ ಆಂತರಿಕ ಭದ್ರತೆಯ ವಿಚಾರವೂ ಆಗಿರುವುದರಿಂದ ಕಮಾಂಡ್ ಸೆಂಟರ್‌ನ ದಾಖಲೆಗಳ ಎಲ್ಲಿಗೆ ಹೋಗುತ್ತವೆ ಎಂದೂ ಗೊತ್ತಾಗದು. ಇದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಗಂಭೀರ ವಿಚಾರ. ಈ ಬಗ್ಗೆ ಅಧಿಕಾರಿಗಳು ಜಾಗೃತರಾಗಿರಬೇಕು. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಅವ್ಯವಹಾರಗಳ ಬಗ್ಗೆ ತನಿಖೆ ಮಾಡಿಸುತ್ತೇವೆ. ಆಗ ರಾಜಕಾಣಿಗಳು ತಪ್ಪಿಸಿಕೊಳ್ಳುತ್ತಾರೆ. ಉತ್ತರಿಸಬೇಕಾದವರು ಅಧಿಕಾರಿಗಳು. ಹಾಗಾಗಿ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸಬಾರದು ಎಂದರು.
ಮನಪಾ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಮಾತನಾಡುತ್ತಿದ್ದ ಸಂದರ್ಭ ಮನಪಾ ಆಯುಕ್ತರು ನಡೆದುಕೊಂಡ ರೀತಿಯು ಖಂಡನಾರ್ಹವಾಗಿದೆ. ಜನಪ್ರತಿನಿಧಿಗೆ ಅಗೌರವ ತೋರುವ ಕಾರ್ಯ ಅಧಿಕಾರಿಗಳಿಂದ ಸರಿಯಲ್ಲ. ಸದನದಲ್ಲಿ ಅಧಿಕಾರಿಗೆ ತನ್ನದೇ ಆದ ಎಲ್ಲೆ ಇದೆ. ಅದನ್ನು ಮೀರಿ ನಡೆಯಬಾರದು ಎಂದು ಅವರು ಹೇಳಿದರು.
ಸ್ಮಾರ್ಟ್ ಸಿಟಿ ಮಂಗಳೂರಿಗೆ ತಂದವರು ನಾವು. ನಾನು ಶಾಸಕನಾಗಿದ್ದ ಸಂದರ್ಭ ನನ್ನ ಅಧ್ಯಯನ, ಬೆವರಿನ ಫಲವಾಗಿ ಮಂಗಳೂರಿಗೆ ಸ್ಮಾರ್ಟ್ ಸಿಟಿ ಮಂಜೂರಾಗಿದೆ. ಇಲ್ಲಿನ ಹಳೆ ಬಂದರು, ಮೀನುಗಾರಿಕೆಗೆ ಆದ್ಯತೆ ನೀಡಿ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಲಾಗಿತ್ತು. ಆದರೆ ಅದೆಲ್ಲವನ್ನೂ ಬದಿಗೊತ್ತಿ, ಫುಟ್‌ಪಾತ್ ರಸ್ತೆಗಳಿಗೆ ಮಹತ್ವ ನೀಡಲಾಗಿದೆ. ಇದೀಗ 32 ಕೋಟಿ ರೂ.ಗಳ ಯೋಜನೆಯನ್ನು ಚೀನಾಕ್ಕೆ ಕೊಡಲು ಬಿಜೆಪಿ ಹೊರಟಿದೆ. ಇದು ಬಿಜೆಪಿಯವರ ದೇಶಪ್ರೇಮವೇ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ವಿನಯರಾಜ್, ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
