ನವೆಂಬರ್ ನಲ್ಲಿ ನಿರುದ್ಯೋಗ ಪ್ರಮಾಣ ಶೇ. 8ಕ್ಕೆ ಏರಿಕೆ: ವರದಿ

ಹೊಸದಿಲ್ಲಿ: ಭಾರತೀಯ ಆರ್ಥಿಕ ನಿಗಾವಣೆ ಕೇಂದ್ರ (CMIE) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ನವೆಂಬರ್ ನಲ್ಲಿ ದೇಶದ ನಿರುದ್ಯೋಗ ಪ್ರಮಾಣ ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದ್ದು, ಶೇ. 8ಕ್ಕೆ ತಲುಪಿದೆ ಎಂದು ವರದಿಯಾಗಿದೆ.
ನಗರ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣ ಅತಿ ಹೆಚ್ಚಿದ್ದು, ಶೇ. 8.96ರಷ್ಟಿದೆ. ಇದೇ ವೇಳೆ ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ. 7.55ರಷ್ಟಿದೆ ಎಂದು ಗುರುವಾರ ಬಿಡುಗಡೆಯಾಗಿರುವ ಭಾರತೀಯ ಆರ್ಥಿಕ ನಿಗಾವಣೆ ಕೇಂದ್ರ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಹೇಳಲಾಗಿದೆ.
ಈ ವರ್ಷದ ಅಕ್ಟೋಬರ್ ನಲ್ಲಿ ನಗರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ. 7.21ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ. 8.04ರಷ್ಟಿತ್ತು.
ದೇಶದ ರಾಜ್ಯಗಳ ಪೈಕಿ ಹರ್ಯಾಣದಲ್ಲಿ ಗರಿಷ್ಠ ಪ್ರಮಾಣದ ನಿರುದ್ಯೋಗವಿದ್ದು, ನವೆಂಬರ್ ತಿಂಗಳಲ್ಲಿ ಅದು ಶೇ. 30.6ರಷ್ಟಕ್ಕೆ ತಲುಪಿದೆ. ತದನಂತರ ರಾಜಸ್ಥಾನದಲ್ಲಿ ಶೇ. 24.5, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 23.9, ಬಿಹಾರದಲ್ಲಿ ಶೇ. 17.3 ಮತ್ತು ತ್ರಿಪುರಾದಲ್ಲಿ ಶೇ. 14.5ರಷ್ಟು ನಿರುದ್ಯೋಗದ ಪ್ರಮಾಣವಿದೆ.
ದೇಶದಲ್ಲಿ ಅತ್ಯಂತ ಕನಿಷ್ಠ ನಿರುದ್ಯೋಗ ಪ್ರಮಾಣ ದಾಖಲಿಸಿರುವ ರಾಜ್ಯಗಳ ಪೈಕಿ ಛತ್ತೀಸ್ ಗಢ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಶೇ. 0.1ರಷ್ಟು ಮಾತ್ರ ನಿರುದ್ಯೋಗ ಪ್ರಮಾಣ ದಾಖಲಾಗಿದೆ. ಇದರ ಬೆನ್ನಿಗೆ ಉತ್ತರಾಖಂಡದಲ್ಲಿ ಶೇ. 1.2, ಒರಿಸ್ಸಾದಲ್ಲಿ ಶೇ. 1.6, ಕರ್ನಾಟಕದಲ್ಲಿ ಶೇ. 1.8 ಹಾಗೂ ಮೇಘಾಲಯದಲ್ಲಿ ಶೇ. 2.1ರಷ್ಟು ಕನಿಷ್ಠ ಪ್ರಮಾಣದ ನಿರುದ್ಯೋಗ ದಾಖಲಾಗಿದೆ.







