ಸಾಗರ | ಎಸ್‌ಎಂಎಸ್ ಮೂಲಕ OTP ನಂಬರ್ ಪಡೆದು ಮಹಿಳೆಗೆ 1.56 ಲಕ್ಷ ರೂ. ವಂಚನೆ ಆರೋಪ: ದೂರು ದಾಖಲು
ಸಾಗರ, ಡಿ.2 : ಎಸ್‌ಬಿಐ ಬ್ಯಾಂಕಿನ ಎಸ್‌ಎಂಎಸ್ ಎಂದು ನಂಬಿದ ಮಹಿಳಾ ಗ್ರಾಹಕರೋರ್ವರು ತಮ್ಮ ಪಾನ್ ನಂಬರ್, ಆಧಾರ್, ಒಟಿಪಿಗಳನ್ನು ಕೊಟ್ಟಿದ್ದರ ಹಿನ್ನೆಲೆಯಲ್ಲಿ 1.56 ಲಕ್ಷ ರೂ. ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ವಂಚನೆಗೊಳಗಾದ ಮಹಿಳೆ ಬುಧವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ಸುಭಾಷ್ ನಗರದ ಪೂಜಾ ಆರ್. ಎಂಬುವವರಿಗೆ ನ. 27ರಂದು ಎಸ್‌ಬಿಐ ಬ್ಯಾಂಕ್ ಮಾದರಿಯಲ್ಲಿದ್ದ ನಕಲಿ ಎಸ್‌ಎಂಎಸ್ ಬಂದಿದ್ದು, ಪಾನ್ ನಂಬರ್ ಕಳುಹಿಸಲು ತಿಳಿಸಲಾಗಿದೆ. ಪೂಜಾ ಅವರು ಪಾನ್ ನಂಬರ್ ಕಳುಹಿಸಿದಾಗ ಬಂದಂತಹ ಒಟಿಪಿಯನ್ನು ಕಳುಹಿಸಲು ಮತ್ತೊಂದು ಮೆಸೇಜ್ ಬಂದಿದೆ. ಈ ರೀತಿ ಬ್ಯಾಂಕಿನಿಂದ ಎಸ್‌ಎಂಎಸ್ ಬಂದಿದೆ ಎಂದು ಮಹಿಳೆ ಆಧಾರ್ ಕಾರ್ಡ್ ವಿವರ, ಮತ್ತೆ ಬಂದ ಒಟಿಪಿಗಳನ್ನೆಲ್ಲ ಎಸ್‌ಎಂಎಸ್ ಮೂಲಕ ಆರೋಪಿಗಳ ನಂಬರ್‌ಗೆ ರವಾನಿಸಿದ್ದಾರೆ. ಇದನ್ನು ಬಳಸಿಕೊಂಡ ಆರೋಪಿಗಳು ಮೊದಲು 9,300 ರೂ. ಹಾಗೂ ಎಂಟು ನಿಮಿಷಗಳ ನಂತರ 1,47,600 ರೂ.ಗಳನ್ನು ವಿತ್‌ಡ್ರಾ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬ್ಯಾಂಕಿನಲ್ಲಿ ತಂದೆಯ ನಿವೃತ್ತಿ ಹಣವಾದ 10 ಲಕ್ಷ ರೂ.ಗಳನ್ನು ಕಳೆದ ಜೂನ್‌ನಲ್ಲಿ ಠೇವಣಿ ಇರಿಸಲಾಗಿತ್ತು. ಖದೀಮರು ಈ ಠೇವಣಿಯ ಮೇಲೆ ಸಾಲದ ಬೇಡಿಕೆಯನ್ನು ಸೃಷ್ಟಿಸಿ ಒಟ್ಟು 1,56,900 ರೂ. ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.