‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್’ ನವ ಮಂಗಳೂರು ಬಂದರಿಗೆ ಆಗಮನ

ಮಂಗಳೂರು, ಡಿ.2: ನವ ಮಂಗಳೂರು ಬಂದರಿಗೆ ಶುಕ್ರವಾರ ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್’ ಹಡಗು ಆಗಮಿಸಿದ್ದು, ಇದು ಈ ಋತುವಿನ ಎರಡನೇ ಕ್ರೂಸ್ ಹಡಗು ಆಗಿದೆ. ಈ ಹಡಗಿನಲ್ಲಿ 686 ಪ್ರಯಾಣಿಕರು ಮತ್ತು 552 ಸಿಬ್ಬಂದಿ ವರ್ಗದ ಸದಸ್ಯರಿದ್ದರು. ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಎನ್‌ಎಂಪಿಎ ಮತ್ತು ಎಂಪಿಎ ಅಧ್ಯಕ್ಷ ಡಾ. ಎ.ವಿ. ರಮಣ ಸ್ವಾಗತ ಕೋರಿದರು.
ಈ ತಂಡದ ಸದಸ್ಯರು ನಗರದ ಸಂತ ಅಲೋಶಿಯಸ್ ಚಾಪೆಲ್, ಕದ್ರಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಕಾರ್ಕಳ ಗೋಮಟೇಶ್ವರ ಪ್ರತಿಮೆ, ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಭೇಟಿ ನೀಡಿದರು.
ಕತರ್‌ನಿಂದ ಮಾಲ್ಡೀವ್ಸ್‌ಗೆ ತೆರಳುವ ಮಾರ್ಗದಲ್ಲಿ ಈ ಹಡಗು ಭಾರತಕ್ಕೆ ಬಂದು ಮೊರ್ಮುಗೋ ಬಂದರಿನಲ್ಲಿ ನಿಂತಿತ್ತು. ಬಳಿಕ ಶುಕ್ರವಾರ ಮಂಗಳೂರಿಗೆ ಆಗಮಿಸಿತು. ಪ್ರಯಾಣಿಕರಿಗೆ ಯಕ್ಷಗಾನ ಮತ್ತು ಸಾಂಪ್ರದಾಯಿಕ ಡೋಲು (ಚಂಡೆ) ಮುಂತಾದ ಸಾಂಪ್ರದಾಯಿಕ ಶೈಲಿಯಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.
ಪ್ರಯಾಣಿಕರ ವೈದ್ಯಕೀಯ ತಪಾಸಣೆ, ಕ್ಷಿಪ್ರ ಸಂಚಾರಕ್ಕಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುವ ಪ್ರಯಾಣಿಕರಿಗೆ 2 ಶಟಲ್ ಬಸ್ ಸೇರಿದಂತೆ 25 ಕೋಚ್‌ಗಳು ಮತ್ತು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಅಂಗಡಿಗಳು, ಟ್ಯಾಕ್ಸಿಗಳು, ಪ್ರವಾಸಿ ವ್ಯಾನ್‌ಗಳು, ಆಯುಷ್ ಇಲಾಖೆಯಿಂದ ಧ್ಯಾನ ಕೇಂದ್ರವನ್ನು ಸಿದ್ಧಪಡಿಸಲಾಗಿದೆ. ಪ್ರವಾಸಿಗರಿಗೆ ಸ್ಥಳೀಯ ಜಾನಪದ ಮತ್ತು ಪ್ರದೇಶದ ಸಂಪ್ರದಾಯಗಳನ್ನು ಚಿತ್ರಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.