ಫಿಫಾ ವಿಶ್ವಕಪ್: ಪೋರ್ಚುಗಲ್,ದಕ್ಷಿಣ ಕೊರಿಯಾ ನಾಕೌಟ್ ಹಂತಕ್ಕೆ ಪ್ರವೇಶ
ರೊನಾಲ್ಡೊ ಪಡೆಗೆ ಕೊನೆಯ ಗ್ರೂಪ್ ಪಂದ್ಯದಲ್ಲಿ ಸೋಲು
ದೋಹಾ, ಡಿ.2: ಫಿಫಾ ವಿಶ್ವಕಪ್‌ನ ಗ್ರೂಪ್ ‘ಎಚ್’ನಲ್ಲಿ ಮೊದಲೆರಡು ಸ್ಥಾನ ಪಡೆದ ಪೋರ್ಚುಗಲ್ ಹಾಗೂ ದಕ್ಷಿಣ ಕೊರಿಯಾ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿವೆ.
ದಕ್ಷಿಣ ಕೊರಿಯಾ ತಂಡವು ಪೋರ್ಚುಗಲ್ ತಂಡವನ್ನು 2-1 ಅಂತರದಿಂದ ಮಣಿಸಿತು. ಈಗಾಗಲೇ ಅಂತಿಮ-16ರ ಸುತ್ತಿಗೆ ಅರ್ಹತೆ ಪಡೆದಿದ್ದ ಪೋರ್ಚುಗಲ್ ತಂಡ ಕೊರಿಯಾದೊಂದಿಗೆ ಮುಂದಿನ ಸುತ್ತಿಗೇರಿತು. ಘಾನಾವನ್ನು ಸೋಲಿಸಿದ್ದ ಉರುಗ್ವೆ ಮುಂದಿನ ಸುತ್ತಿಗೇರುವ ಅವಕಾಶದಿಂದ ವಂಚಿತವಾಯಿತು.
ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಹಾಗೂ ಪೋರ್ಚುಗಲ್ ಮೊದಲಾರ್ಧದ ಅಂತ್ಯಕ್ಕೆ 1-1 ಅಂತರದಿಂದ ಡ್ರಾ ಸಾಧಿಸಿದ್ದವು. ಹೆಚ್ಚುವರಿ ಸಮಯದಲ್ಲಿ(90+1)ಗೋಲು ಗಳಿಸಿದ ಹ್ವಾಂಗ್ ಹೀ-ಚಾನ್ ಕೊರಿಯಾಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಡಿಯಾಗೊ ಡೊಲಟ್ ನೀಡಿದ ಕ್ರಾಸ್‌ನ್ನು ಪಡೆದ ರಿಕಾರ್ಡೊ ಹೋರ್ಟಾ ಪೋರ್ಚುಗಲ್‌ಗೆ 5ನೇ ನಿಮಿಷದಲ್ಲಿ 1-0 ಮುನ್ನಡೆ ಒದಗಿಸಿಕೊಟ್ಟರು. 27ನೇ ನಿಮಿಷದಲ್ಲಿ ಗೋಲು ಗಳಿಸಿದ ಕಿಮ್ ಯಂಗ್ ಗ್ವಾನ್ ದಕ್ಷಿಣ ಕೊರಿಯಾ 1-1ರಿಂದ ಸಮಬಲ ಸಾಧಿಸಲು ನೆರವಾದರು.
‘ಎಚ್’ ಗುಂಪಿನಲ್ಲಿ 3 ಪಂದ್ಯಗಳಲ್ಲಿ ಒಟ್ಟು 6 ಅಂಕ ಸಂಪಾದಿಸಿದ ಪೋರ್ಚುಗಲ್ ಅಗ್ರಸ್ಥಾನಿಯಾಗಿ ಮುನ್ನಡೆಯಿತು. 3 ಪಂದ್ಯಗಳಲ್ಲಿ ಒಟ್ಟು 4 ಅಂಕ ಗಳಿಸಿದ ದಕ್ಷಿಣ ಕೊರಿಯಾ ತಂಡ ರನ್ನರ್ಸ್ ಅಪ್ ಆಗಿ ನಾಕೌಟ್ ಹಂತಕ್ಕೇರಿತು.
ಘಾನಾವನ್ನು ಸೋಲಿಸಿದರೂ ಉರುಗ್ವೆ ಟೂರ್ನಿಯಿಂದ ಔಟ್
ಅಲ್ ಜನಾಬ್ ಸ್ಟೇಡಿಯಮ್‌ನಲ್ಲಿ ನಡೆದ ಮತ್ತೊಂದು ಗ್ರೂಪ್ ‘ಎಚ್’ ಪಂದ್ಯದಲ್ಲಿ ಉರುಗ್ವೆ ತಂಡ ಘಾನಾ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು. ಘಾನಾದ ಆ್ಯಂಡ್ರೆ ಅಯೀವ್ ಪೆನಾಲ್ಟಿ ಅವಕಾಶವನ್ನು ತಪ್ಪಿಸಿಕೊಂಡ ಬಳಿಕ ಉರುಗ್ವೆ ಮೇಲುಗೈ ಸಾಧಿಸಿತು. 26ನೇ ನಿಮಿಷದಲ್ಲಿ ಜೊರ್ಜಿಯನ್ ಮೊದಲ ಗೋಲು ಗಳಿಸಿ ಉರುಗ್ವೆಗೆ ಮುನ್ನಡೆ ಒದಗಿಸಿಕೊಟ್ಟರು. ಆರು ನಿಮಿಷದ ಬಳಿಕ ಜೊರ್ಜಿಯನ್ ಮತ್ತೊಂದು ಗೋಲು ಗಳಿಸಿ ಉರುಗ್ವೆಯ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
2010ರ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಉರುಗ್ವೆ ತಂಡ ಘಾನಾವನ್ನು ಮಣಿಸಿ ಟೂರ್ನಿಯಿಂದ ಹೊರಹಾಕಿತ್ತು.