ವೈದ್ಯಕೀಯ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಬೆಳೆಸೋಣ: ಕಮಿಷನರ್ ಶಶಿಕುಮಾರ್

ಕೊಣಾಜೆ: ಶಿಕ್ಷಣದಿಂದ ಮಾನವೀಯತೆಯನ್ನು ಪಡೆದುಕೊಳ್ಳೋಣ. ತಮ್ಮ ಮೇಲಿನ ಆತ್ಮವಿಶ್ವಾಸವನ್ನು ಬೆಳೆಸುತ್ತಾ, ಸಂಸ್ಥೆಯು ನೀಡಿದ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು, ಕಠಿಣ ಶ್ರಮದಿಂದ ಯಶಸ್ಸು ಸಾಧಿಸಿ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅಭಿಪ್ರಾಯಪಟ್ಟರು.
ಅವರು ನಾಟೆಕಲ್ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಿಟೋರಿಯಂನಲ್ಲಿ ಶನಿವಾರ ನಡೆದ ಕಣಚೂರು ವೈದ್ಯಕೀಯ ಸ್ನಾತಕೋತ್ತರ ವಿಭಾಗದ ದ್ವಿತೀಯ ಬ್ಯಾಚ್ ನ ಪ್ರವೇಶಾತಿ ದಿನ ಹಾಗೂ ಹೆಲ್ತ್ ಸೈನ್ಸಸ್ ಅಡ್ವೈಸರಿ ಕೌನ್ಸಿಲ್ ನ ಉದ್ಘಾಟನೆ ನೆರವೆರಿಸಿ ಮಾತನಾಡಿದರು.
ಯಾವುದೇ ಸನ್ನಿವೇಶಕ್ಕೆ ತಕ್ಷಣ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ. ಪರಾಂಬರಿಸಿ ಮುನ್ನಡೆಯುವುದೇ ಬುದ್ಧಿವಂತರ ಲಕ್ಷಣ. ಕಣಚೂರು ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿರುವುದರಿಂದ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಮಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮಾತನಾಡಿ, ಟೋಕ್ಯೋ ವೈದ್ಯಕೀಯದಲ್ಲಿ ಮಾನವ ಹಕ್ಕುಗಳ ಘೋಷಣೆ ನಡೆಸಿದಂತೆ ಪ್ರಾಥಮಿಕವಾಗಿ ಯಾರಿಗೂ ನೋವಾಗದಂತೆ ವೈದ್ಯರು ನಡೆಯುವಂತೆ ಘೋಷಿಸಿತ್ತು. ಮಾನವೀಯತೆಯನ್ನು ಮೈಗೂಡಿಸಿಕೊಂಡು ವೈದ್ಯಕೀಯ ಬದುಕು ರೂಪಿಸಿ ಎಂದರು.
ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ, ವೈದ್ಯಕೀಯ ಕ್ಷೇತ್ರದ ಪಾದಾರ್ಪಣೆ ಕನಸ್ಸಾಗಿತ್ತು. ಮಕ್ಕಳೆಲ್ಲರೂ ದೊಡ್ಡವರಾದ ನಂತರ ಅವರಿಂದ ಸಿಕ್ಕಂತಹ ಪ್ರೋತ್ಸಾಹ ಇಂದು ವೈದ್ಯಕೀಯ ಕಾಲೇಜು ಸ್ಥಾಪಿಸಿ, ಎರಡನೇ ವರ್ಷದ ಸ್ನಾತಕೋತ್ತರ ವಿಭಾಗವನ್ನು ಮುಂದುವರಿಸಲು ಸಾಧ್ಯವಾಗಿದೆ. ನುರಿತ ವೈದ್ಯರ ತಂಡ ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಕಾರ್ಯಾಚರಿಸಲಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರ ಎಂದರು.
ಪೊಲೀಸ್ ಕಮೀಷನರ್ ಯು.ಎನ್ ಶಶಿಕುಮಾರ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಕಣಚೂರು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ , ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಣಚೂರು ವೈದ್ಯಕೀಯ ಕಾಲೇಜು ಡೀನ್ ಕರ್ನಲ್ ಡಾ. ಕೆ.ಜಿ ಕಿರಣ್ ಸ್ವಾಗತಿಸಿದರು. ಡಾ.ಪ್ರಿಯಾಂಕ ನಿರೂಪಿಸಿದರು. ಕಿಮ್ಸ್ ನಿರ್ದೇಶಕ ಅಬ್ದುಲ್ ರಹ್ಮಾನ್ ಕಣಚೂರು ವಂದಿಸಿದರು.
