ಫಿಫಾ ವಿಶ್ವಕಪ್ : ಅಮೆರಿಕಕ್ಕೆ ಸೋಲುಣಿಸಿದ ನೆದರ್‌ಲ್ಯಾಂಡ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಮೊದಲ ನಾಕೌಟ್ ಪಂದ್ಯ

ದೋಹಾ, ಡಿ.3: ಫಿಫಾ ವಿಶ್ವಕಪ್‌ನ ಮೊದಲ ನಾಕೌಟ್ ಪಂದ್ಯದಲ್ಲಿ ಅಮೆರಿಕದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದ ನೆದರ್‌ಲ್ಯಾಂಡ್ಸ್ 3-1 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಶನಿವಾರ ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಮೆಂಫಿಸ್ ಡೆಪೆ 10ನೇ ನಿಮಿಷದಲ್ಲಿ ಗೋಲು ಗಳಿಸಿ ನೆದರ್‌ಲ್ಯಾಂಡ್ಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಡೆಪೆ ಡಚ್ ತಂಡದ ಪರ 44ನೇ ಅಂತರ್‌ರಾಷ್ಟ್ರೀಯ ಗೋಲು ಗಳಿಸಿದರು.
46ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಡೇಲಿ ಬ್ಲೈಂಡ್ ನೆದರ್‌ಲ್ಯಾಂಡ್ಸ್ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಈ ಮೂಲಕ ನೆದರ್‌ಲ್ಯಾಂಡ್ಸ್ ಮೊದಲಾರ್ಧದ ಅಂತ್ಯಕ್ಕೆ 2-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ದ್ವಿತೀಯಾರ್ಧದ 76ನೇ ನಿಮಿಷದಲ್ಲಿ ಗೋಲು ಗಳಿಸಿದ ರೈಟ್ ಅಮೆರಿಕದ ಸೋಲಿನ ಅಂತರ ತಗ್ಗಿಸಿದರು. ಹಲವು ವಿಫಲ ಯತ್ನಗಳ ಬಳಿಕ ಅಮೆರಿಕ ಕೊನೆಗೂ ಗೋಲು ಗಳಿಸಿತು. ಕ್ರಿಶ್ಚಿಯನ್ ಪುಲ್‌ಸಿಕ್ ನೀಡಿದ ಪಾಸನ್ನು ರೈಟ್ ಉತ್ತಮವಾಗಿ ಬಳಸಿಕೊಂಡರು.
81ನೇ ನಿಮಿಷದಲ್ಲಿ ಗೋಲು ಗಳಿಸಿದ ಡೆಂಝಿಲ್ ಡಮ್‌ಫ್ರೈಸ್ ನೆದರ್‌ಲ್ಯಾಂಡ್ಸ್‌ಗೆ 3-1 ಮುನ್ನಡೆ ಒದಗಿಸಿಕೊಟ್ಟರು. ಡೆಂಝಿಲ್ ಟೂರ್ನಮೆಂಟ್‌ನಲ್ಲಿ ತನ್ನ ಮೊದಲ ಗೋಲು ಗಳಿಸಿ ಗಮನ ಸೆಳೆದರು.
ಅಮೆರಿಕವನ್ನು ಮಣಿಸಿರುವ ನೆದರ್‌ಲ್ಯಾಂಡ್ಸ್ ಸತತ 19ನೇ ಪಂದ್ಯದಲ್ಲಿ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.
The Netherlands progress to the Quarter-finals! @adidasfootball | #FIFAWorldCup
— FIFA World Cup (@FIFAWorldCup) December 3, 2022