ಸಿರವಾರ: ಪಿಎಸ್ಸೈ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆ
ರಾಯಚೂರು, ಡಿ.4: ಸಿರವಾರ ಪಟ್ಟಣದ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಸೈ ಗೀತಾಂಜಲಿ ಶಿಂಧೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿ, ಡೆತ್ನೋಟ್ ಬರೆದಿಟ್ಟು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಸಿರವಾರ ನಿವಾಸಿ ತಾಯಣ್ಣ ನಾಪತ್ತೆಯಾದ ಯುವಕ. ಪಿಎಸ್ಸೈ ಗೀತಾಂಜಲಿ ಶಿಂಧೆ ಕಿರುಕುಳ ನೀಡುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಪಿಎಸ್ಸೈ ಗೀತಾಂಜಲಿ ಅವರೇ ಕಾರಣ ಎಂದು ತಾಯಣ್ಣ ಬರೆದಿದ್ದೆನ್ನಲಾದ ಡೆತ್ ನೋಟ್ ನಲ್ಲಿ ಆಪಾದಿಸಲಾಗಿದೆ.
’ಪಿಎಸ್ಸೈ ಗೀತಾಂಜಲಿ ಶಿಂಧೆ ಮೂರು ತಿಂಗಳಿಂದ ವಿನಾಕಾರಣ ನನ್ನನ್ನು ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದರು’ ಎಂದು ತಾಯಣ್ಣ ಆರೋಪ ಮಾಡಿದ್ದಾರೆ. ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿರುವ ಬಗ್ಗೆ ತಾಯಣ್ಣ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಕಾರಣಕ್ಕಾಗಿ ತಾಯಣ್ಣನನ್ನು ಡಿಸೆಂಬರ್ 2 ರಂದುಠಾಣೆಗೆ ಕರೆಸಿ, ಬಹಳ ಹೊತ್ತು ಲಾಕಪ್ನಲ್ಲಿ ಕೂರಿಸಿದ್ದರು. ಇದರಿಂದ ಮನನೊಂದಿರುವುದಾಗಿ ಯುವಕ ತಿಳಿಸಿದ್ದಾನೆ.
ನನಗೆ ಹೊರಗಡೆ ಹೋದಾಗಲೆಲ್ಲ ಜೀಪ್ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ತಾಯಣ್ಣ ನಾಪತ್ತೆಯಾಗಿರುವುದರಿಂದ ಕುಟುಂಬದವರು ಆತಂಕಿತರಾಗಿದ್ದು, ಹುಡುಕಾಟ ಆರಂಭಿಸಿದ್ದಾರೆ.