ಮಂಗಳೂರು : ನಾಪತ್ತೆಯಾಗಿದ್ದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಉಳ್ಳಾಲ: ಪಾಸ್ ಪೋರ್ಟ್ ರಿನಿವಲ್ ಮಾಡಿಸಲೆಂದು ಬೆಂಗಳೂರಿನಿಂದ ಬಂದು ತೊಕ್ಕೊಟ್ಟಿನ ಲಾಡ್ಜ್ ನಲ್ಲಿ ತಂಗಿದ್ದ ಯುವಕ ಶುಕ್ರವಾರ ನಾಪತ್ತೆಯಾಗಿದ್ದು, ಆತನ ಮೃತದೇಹ ಲಾಡ್ಜ್ ಸಮೀಪದ ಮನೆಯೊಂದರ ಬಾವಿಯಲ್ಲಿ ರವಿವಾರ ಪತ್ತೆಯಾಗಿದೆ.
ಮೂಲತ: ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ, ಬೆಂಗಳೂರಿನಲ್ಲಿ ವಾಸವಿದ್ದ ಮಹಂತೇಶ್ ಎ.ಎಸ್ (36) ಮೃತರು ಎಂದು ಗುರುತಿಸಲಾಗಿದೆ.
ಮಹಂತೇಶ್ ಕಳೆದ ಬುಧವಾರ ತೊಕ್ಕೊಟ್ಟು ಕಾಪಿಕಾಡುನಲ್ಲಿರುವ ಲಾಡ್ಜ್‌ನಲ್ಲಿ ತಂಗಿದ್ದರು. ಶುಕ್ರವಾರ ಸಂಜೆ ಲಾಡ್ಜ್ ಸಿಬ್ಬಂದಿ ರೂಮನ್ನು ತಪಾಸಣೆ ಮಾಡಿದಾಗ ಮಹಂತೇಶ್ ನಾಪತ್ತೆಯಾಗಿರುವ ಬಗ್ಗೆ ಅರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಮಹಂತೇಶ್ ಅವರ ಸಹೋದರಿ ಉಳ್ಳಾಲ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಇಂದು ಮಧ್ಯಾಹ್ನ ಅಂಬಿಕಾರೋಡ್ ಹೆದ್ದಾರಿ ಅಂಚಿನಲ್ಲಿರುವ ಮನೆಯ ಬಾವಿಯಲ್ಲಿ ಮಹಂತೇಶ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಮೃತದೇಹದ ಪ್ಯಾಂಟ್ ಜೇಬಲ್ಲಿ ಲಾಡ್ಜ್ ನ ರೂಂ ಕೀಲಿ ಕೈ ಮತ್ತು ಮಹಂತೇಶ ಅರಸೀಕೆರೆ ಎಂದು ಸ್ಟಿಕ್ಕರ್ ಹಚ್ಚಿರುವ ಪೆನ್ ಡ್ರೈವ್ ಲಭಿಸಿದ್ದು, ಪೊಲೀಸರು ಲಾಡ್ಜ್ ಸಿಬ್ಬಂದಿಯನ್ನು ಕರೆಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.