ತಮಿಳುನಾಡು: ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ

ತಿರುಚ್ಚಿ (ತಮಿಳುನಾಡು), ಡಿ. 3: ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು ಕಾರ್ಮಿಕರು ಮರಕ್ಕೆ ಕಟ್ಟಿಹಾಕಿ ಥಳಿಸಿ ಹತ್ಯೆಗೈದ ಘಟನೆ ತಿರುಚ್ಚಿ-ಮಧುರೈ ಹೆದ್ದಾರಿಯ ಮಣಿಕಂಠಂನಲ್ಲಿರುವ ಆಶಾಪುರ ಮರದ ಮಿಲ್ನಲ್ಲಿ ನಡೆದಿದೆ.
ಈ ಮರದ ಮಿಲ್ಗೆ ನೈಜೀರಿಯಾ ಹಾಗೂ ಮ್ಯಾನ್ಮಾರ್ನಿಂದ ಅತ್ಯುತ್ತಮ ಮರಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಮಿಲ್ನಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮರದ ಮಿಲ್ ನ ಒಳಗೆ ಶನಿವಾರ ಬೆಳಗ್ಗೆ ವ್ಯಕ್ತಿಯೋರ್ವ ಪ್ರವೇಶಿಸುತ್ತಿರುವುದನ್ನು ನೋಡಿದ ಅಸ್ಸಾಂನ ಮೂವರು ಕಾರ್ಮಿಕರು ಆತನನ್ನು ಸೆರೆ ಹಿಡಿದ್ದಾರೆ. ಕಳ್ಳನೆಂದು ಶಂಕಿಸಿ ಆತನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಅನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಸ್ಥಳಕ್ಕೆ ತಲುಪಿದಾಗ ವ್ಯಕ್ತಿ ಮೃತಪಟ್ಟಿದ್ದ. ಮೃತ ವ್ಯಕ್ತಿಯನ್ನು ತುವಾಕುಡಿಯ ಚಕ್ರವರ್ತಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂನ ಫೈಝಲ್ ಶೇಖ್, ಮಫ್ಜುಲ್ ಹುಕ್ ಹಾಗೂ ಮರದ ಮಿಲ್ನ ಮಾಲಕ ಧಿರೇಂದ್ರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.





