ಫಿಫಾ ವಿಶ್ವಕಪ್: ಇಂಗ್ಲೆಂಡ್‍ಗೆ ಸುಲಭದ ತುತ್ತಾದ ಸೆನೆಗಲ್

ಹೊಸದಿಲ್ಲಿ: ಸೆನೆಗಲ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ, ಕತರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup 2022) ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿದೆ.
ಸೋಮವಾರ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸುಲಭ ಜಯ ಸಾಧಿಸುವ ಮೂಲಕ ಇಂಗ್ಲೆಂಡ್, ಎಂಟರ ಘಟ್ಟದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಪೋಲಂಡ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದ ಫ್ರಾನ್ಸ್ ರವಿವಾರ ಕ್ವಾರ್ಟರ್ ಫೈನಲ್ ತಲುಪಿತ್ತು.
ಇಂಗ್ಲೆಂಡ್ ಪರ ಜೋರ್ಡನ್ ಹೆಂಡರ್ಸನ್, ಹ್ಯಾರಿ ಕೇನ್ ಮತ್ತು ಬುಕಾಯೊ ಸಕಾ ಗೋಲುಗಳಿಸಿದರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಇಂಗ್ಲೆಂಡ್ ತಂಡ ಇದುವರೆಗೆ 12 ಗೋಲುಗಳನ್ನು ಗಳಿಸಿದ್ದು, ಕಳೆದ ಬಾರಿಯ ವಿಶ್ವಕಪ್‍ನಲ್ಲಿ ರಷ್ಯಾ ಗಳಿಸಿದ್ದ ಅತ್ಯಧಿಕ ಗೋಲುಗಳ ದಾಖಲೆಯನ್ನು ಸರಿಗಟ್ಟಿದೆ.
ಆಫ್ರಿಕನ್ ಚಾಂಪಿಯನ್ ತಂಡದ ವಿರುದ್ಧ ಆಟದ ಲಯ ಕಂಡುಕೊಳ್ಳಲು ಸಮಯ ತೆಗೆದುಕೊಂಡ ಇಂಗ್ಲೆಂಡ್‍ಗೆ 38ನೇ ನಿಮಿಷದಲ್ಲಿ ಹೆಂಡರ್ಸನ್ ಮುನ್ನಡೆ ಗಳಿಸಿಕೊಟ್ಟರು. ವಿರಾಮಕ್ಕಿಂತ ಸ್ವಲ್ಪ ಮುನ್ನ ಕೇನ್ ಕತರ್‌ನಲ್ಲಿ ತಮ್ಮ ಗೋಲಿನ ಖಾತೆ ತೆರೆಯುವ ಮೂಲಕ ಮುನ್ನಡೆ ಹಿಗ್ಗಿಸಿದರು. 57ನೇ ನಿಮಿಷದಲ್ಲಿ ಸಕಾ ಈ ಟೂರ್ನಿಯ ಮೂರನೇ ಗೋಲು ಗಳಿಸಿ ಇಂಗ್ಲೆಂಡ್ ಅಭಿಮಾನಿಗಳಿಗೆ ಮುದ ನೀಡಿದರು.
ಈ ಗೆಲುವಿನೊಂದಿಗೆ ಎಂಟು ವಿಶ್ವಕಪ್ ಸೇರಿದಂತೆ ಆಫ್ರಿಕನ್ ತಂಡಗಳ ವಿರುದ್ಧದ ಇಂಗ್ಲೆಂಡ್ ಗೆಲುವಿನ ಸರಣಿ 21 ಪಂದ್ಯಗಳಿಗೆ ವಿಸ್ತರಿಸಿದಂತಾಗಿದೆ. ಮಂಗಳವಾರ ನಡೆಯುವ 16ರ ಘಟ್ಟದ ಪಂದ್ಯದಲ್ಲಿ ಸ್ಪೇನ್ ಸವಾಲು ಎದುರಿಸಲಿರುವ ಮೊರಾಕ್ಕೊ, ಟೂರ್ನಿಯಲ್ಲಿ ಉಳಿದುಕೊಂಡಿರುವ ಏಕೈಕ ಆಫ್ರಿಕನ್ ತಂಡವಾಗಿದೆ.
ಅಮಾನತುಗೊಂಡಿರುವ ಇದ್ರಿಸ್ಸಾ ಗೂಯೆ ಮತ್ತು ಗಾಯಾಳು ಚೀಖೊ ಕ್ಯುಯಾಟೆಯವರ ಅನುಪಸ್ಥಿತಿಯಿಂದಾಗಿ ಸೆನೆಗಲ್‍ನ ಮಿಡ್‍ಫೀಲ್ಡ್ ಬಲ ಕುಗ್ಗಿ, ಪ್ರಬಲ ಇಂಗ್ಲೆಂಡ್‍ಗೆ ಸರಿಸಾಟಿ ಹೋರಾಟ ಸಂಘಟಿಸಲು ಪುಟ್ಟ ಆಫ್ರಿಕನ್ ದೇಶಕ್ಕೆ ಸಾಧ್ಯವಾಗಲಿಲ್ಲ.
England move on to the last 8!@adidasfootball | #FIFAWorldCup
— FIFA World Cup (@FIFAWorldCup) December 4, 2022
Big.
— FIFA World Cup (@FIFAWorldCup) December 4, 2022