ಸಿ.ಟಿ.ರವಿ ಹೇಳಿಕೆ ಬಿಜೆಪಿಯನ್ನು ಬೆತ್ತಲುಗೊಳಿಸಿದೆ: ರಮಾನಾಥ ರೈ
ಬಿಜೆಪಿಗೆ ರೌಡಿಶೀಟರ್‌ಗಳ ಸೇರ್ಪಡೆ ವಿಚಾರ

ಮಂಗಳೂರು, ಡಿ.5: ಬಿಜೆಪಿಗೆ ರೌಡಿ ಶೀಟರ್‌ಗಳನ್ನು ಸೇರ್ಪಡೆಗೊಳಿಸುವ ವಿಚಾರವನ್ನು ಸಮರ್ಥಿಸಿಕೊಂಡು ಸಿ.ಟಿ.ರವಿ ನೀಡಿರುವ ಹೇಳಿಕೆ ಬಿಜೆಪಿಯನ್ನು ಬೆತ್ತಲುಗೊಳಿಸಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೌಡಿಶೀಟರ್ ಆಗಲು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರಬೇಕಾಗುತ್ತದೆ. ಅಂತಹ ವ್ಯಕ್ತಿಗಳು ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ತಪ್ಪಲ್ಲ. ನಾನು ರೌಡಿಶೀಟರ್ ಆಗಿದ್ದವ. ರಾಜಕೀಯ ಕ್ಷೇತ್ರದಲ್ಲಿ ಇದೆಲ್ಲಾ ಸಾಮಾನ್ಯ ಎಂದು ಸಿ.ಟಿ.ರವಿ ಹೇಳುವ ಮೂಲಕ ಬಿಜೆಪಿಯಲ್ಲಿ ರೌಡಿಸಂ ಮಾಡುವವರಿಗೆ ಅವಕಾಶ ನೀಡಲಾಗುತ್ತೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಹಿಂದಿನಿಂದಲೂ ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿದ್ದು, ಈ ದ್ವೇಷ ಹತ್ಯೆಗಳಿಗೂ ಕಾರಣವಾಗಿದೆ. ಹಿಂದೆಲ್ಲಾ ಕೋಮು ಸಂಘರ್ಷ ಸಂದರ್ಭ ಹತ್ಯೆಗಳು ನಡೆಯುತ್ತಿತ್ತು. ಆದರೆ ಇದೀಗ ಇಂತಹ ಹತ್ಯೆಗಳು ಸಾಮಾನ್ಯ ಎಂಬಂತೆ ಆಗಿದೆ. ಇಂತಹ ಹತ್ಯಾ ಪ್ರಕರಣಗಳ ಎಫ್‌ಐಆರ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹೆಸರಿಲ್ಲ ಎಂಬುದನ್ನು ನಾನು ಹೇಳಬಲ್ಲೆ ಎಂದು ಅವರು ಹೇಳಿದರು.
ಟೋಲ್ ಬಗ್ಗೆ ಉಸ್ತುವಾರಿ ಸಚಿವರ ಹೇಳಿಕೆಗೆ ಖಂಡನೆ
ಸುರತ್ಕಲ್ ಟೋಲ್ ಗೇಟ್ ರದ್ದತಿ ಕುರಿತಂತೆ ಸಾಮಾಜಿಕ ನಾಯಕರ ನೇತೃತ್ವದಲ್ಲಿ ನಡೆದ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಈ ನಡುವೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಹಿತಾಸಕ್ತಿ ಮರೆತು ಹೇಳಿಕೆ ನೀಡಿದ್ದು, ಅದನ್ನು ಖಂಡಿಸುವುದಾಗಿ ಹೇಳಿದರು.
ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಉಡುಪಿ ನೋಂದಣಿಯ ವಾಹನಗಳಿಗೆ ಪೂರ್ಣ ವಿನಾಯಿತಿ ನೀಡಿ ವಾಹನಗಳ ಓಡಾಟಕ್ಕೆ ಪ್ರತ್ಯೇಕ ಲೇನ್ ನಿರ್ಮಿಸಬೇಕು ಎಂಬ ಸಚಿವರ ಪ್ರಸ್ತಾಪ ಖಂಡನೀಯ. ಮಾತ್ರವಲ್ಲದೆ, ಬ್ರಹ್ಮರಕೂಟ್ಲು, ತಲಪಾಡಿ, ಹೆಜಮಾಡಿಗೆ ಸುರತ್ಕಲ್ ಟೋಲ್ ಶುಲ್ಕ ಹಂಚಿಕೆ ಮಾಡಬೇಕೆಂಬ ಪ್ರಸ್ತಾಪವನ್ನೂ ವಿರೋಧಿಸುವುದಾಗಿ ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಸ್‌ಐಟಿಗೆ ಆಗ್ರಹ
ಸಿದ್ದರಾಮಯ್ಯ ಸರಕಾರ ಇದ್ದಾಗ ಏಳು ಪ್ರಮುಖ ಹತ್ಯಾ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಆದರೆ ಬಿಜೆಪಿ ಸುಳ್ಳು ಹೇಳುವುದೇ ತಮ್ಮ ಧರ್ಮ ಎಂಬುದನ್ನು ಕರಗತ ಮಾಡಿಕೊಂಡಿದೆ. ಹತ್ಯಾ ಪ್ರಕರಣಗಳು ನಡೆದಾಗ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ಮಾಡಿ ತನಿಖೆ ನಡೆಸಿದರೆ ನೈಜ ಅಂಶಗಳು ಹೊರ ಬರುತ್ತವೆ. ಇಂತಹ ಹತ್ಯೆಗಳ ಹಿಂದಿನ ಸೂತ್ರಧಾರನ್ನು ಹಿಡಿಯಬಹುದಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಎಸ್‌ಐಟಿ (ವಿಶೇಷ ತನಿಖಾ ತಂಡ) ಇಂತಹ ಕೋಮು ದ್ವೇಷದಿಂದ ನಡೆದ ಹತ್ಯೆಗಳನ್ನು ತನಿಖೆಗೆ ಒಳಪಡಿಸಲು ಆಗ್ರಹಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಪ್ರತಿಭಾ ಕುಳಾಯಿ, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ನೀರಜ್ ಪಾಲ್, ಸಿ.ಎಂ. ಮುಸ್ತಫಾ, ಶಬೀರ್, ನಿತ್ಯಾನಂದ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.
