ಡಿ.6ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ

ಮಂಗಳೂರು, ಡಿ.5: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ಕ್ಯಾಂಪಸ್ ನಲ್ಲಿ ಡಿ.6ರಂದು ಸಂಜೆ 5 ಗಂಟೆಗೆ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೆಯ ಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇದೇ ಸಂದರ್ಭ ಡಾ.ಬಿ.ಆರ್.ಅಂಬೇಡ್ಕರ್ ರವರ 9 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನಾವರಣ ಮಾಡಲಿದ್ದಾರೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ನಿರ್ಮಾಣವಾದ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ 600 ಕೆಜಿ ತೂಕವಿದ್ದು, ರೂ.14.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಮಂಗಳೂರು ವಿವಿಯಲ್ಲಿ ಅಂಬೇಡ್ಕರ್‌ರವರ ಪ್ರತಿಮೆ ಸ್ಥಾಪಿಸುವುದು ಕನಸಾಗಿತ್ತು. ಅದೀಗ ನೆರವೇರಿದೆ. ವಿಶ್ವವಿದ್ಯಾನಿಲಯದ ವಿಜ್ಞಾನ ಸಂಕೀರ್ಣದ ಮುಂಭಾಗದಲ್ಲಿರುವ ಹೋದೋಟದಲ್ಲಿ ಪ್ರತಿಮೆ ನಿರ್ಮಾಣವಾಗಿದೆ. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಆರ್.ಎಸ್.ಕುರೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪರಿನಿರ್ವಾಣ ದಿನದ ಬಗ್ಗೆ ಮಾತನಾಡಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿಯ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ., ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಿಶ್ವನಾಥ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಪಿ.ಉಮೇಶ್ಚಂದ್ರ ಉಪಸ್ಥಿತರಿದ್ದರು.