ವಕ್ಫ್ ಮಂಡಳಿಯಿಂದ ಹೆಣ್ಣು ಮಕ್ಕಳಿಗಾಗಿ ಕಾಲೇಜುಗಳ ಸ್ಥಾಪನೆ ಸ್ವಾಗತಾರ್ಹ: BJP ಶಾಸಕ ಸಿದ್ದು ಸವದಿ
ಬಾಗಲಕೋಟೆ, ಡಿ. 5: ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಕಾಲೇಜುಗಳನ್ನು ಸ್ಥಾಪಿಸಲು ವಕ್ಫ್ ಮಂಡಳಿ ಕೈಗೊಂಡಿರುವ ಉಪಕ್ರಮ ಸ್ವಾಗತಾರ್ಹ ಎಂದು ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಬಾಗಲಕೋಟೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧೀನದಲ್ಲಿರುವ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಹಾಗೂ ಪದಾಧಿಕಾರಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗಾಗಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದರಿಂದ, ಅಲ್ಪಸಂಖ್ಯಾತರಲ್ಲಿನ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೋಗಲಾಡಿಸಬಹುದು. ಜೊತೆಗೆ, ಮುಸ್ಲಿಮರು, ಸರಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಮಸೀದಿಗಳು, ಈದ್ಗಾಗಳು, ಸ್ಮಶಾನಗಳು, ಮದುವೆ ಮಂಟಪಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಮಾಜದ ಎಲ್ಲ ವರ್ಗದವರನ್ನು ಮುಂದೆ ತರಲು ಶ್ರಮಿಸುವುದು ಇಂದಿನ ಅಗತ್ಯವಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಮಾಜ ಸೇವೆ ಮಾಡಬೇಕಿದೆ ಎಂದರು.
ಪ್ರತಿಯೊಂದು ತಾಲೂಕು ಹಾಗೂ ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡಿ, ಅವುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಮುದಾಯ, ರಾಜ್ಯ ಹಾಗೂ ರಾಷ್ಟ್ರಕ್ಕೆ ಪ್ರಯೋಜನ ಕಲ್ಪಿಸಿಕೊಡಬೇಕಿದೆ. ರಾಜ್ಯದಲ್ಲಿ ಸುಮಾರು 90 ಲಕ್ಷದಷ್ಟು ಮುಸ್ಲಿಮರು ಇದ್ದಾರೆ. ಅದರ ಆಧಾರದಲ್ಲಿ 30ಕ್ಕೂ ಹೆಚ್ಚು ಮುಸ್ಲಿಮ್ ಶಾಸಕರನ್ನು ಆಯ್ಕೆ ಮಾಡಬಹುದು. ನಾಲ್ಕರಿಂದ ಐದು ಮಂದಿ ಲೋಕಸಭಾ ಸದಸ್ಯರಾಗಬಹುದು. ಇದಕ್ಕಾಗಿ, ಸಮುದಾಯ ಸಂಘಟಿತರಾಗುವುದು ಅವಶ್ಯಕ ಎಂದು ಅವರು ಹೇಳಿದರು
ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ಪುನಃ ವಕ್ಫ್ ಬೋರ್ಡ್ ಅಧೀನಕ್ಕೆ ಪಡೆಯುವ ನಿಟ್ಟಿನಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ. ಯಾವುದೆ ಕಾರಣಕ್ಕೂ ವಕ್ಫ್ ಆಸ್ತಿಗಳ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ. ವಕ್ಫ್ ಆಸ್ತಿಗಳನ್ನು ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಬಳಕೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.
ಕಾರ್ಯಾಗರದಲ್ಲಿ ರಬಕವಿ, ಬನಹಟ್ಟಿ ಸೇರಿದಂತೆ ಇನ್ನಿತರ ತಾಲೂಕುಗಳ ಉಸ್ತುವಾರಿಗಳು, ಅಂಜುಮನ್ ಎ ಇಸ್ಲಾಮ್ ಕಮಿಟಿಯ ಸದಸ್ಯರಾದ ಮೆಹಬೂಬ್ ಸರ್ಫರಾಝ್, ಬದನ್ ಸಾಹಿಬ್ ಜಾಮದಾರ್, ಅಯ್ಯೂಬ್ ಖಾನ್, ಇಕ್ಬಾಲ್, ಶಕೀಲ್ ನದಾಫ್, ಜಾವೇದ್ ಬಾಗವಾನ್, ಅಬೂಬಕರ್ ಶಾಲೇದಾರ್, ಡಾ.ಅಖ್ತರ್ ತಾಂಬೋಳಿ, ಮೊಹಸಿನ್ ಗೋಕಾಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.