ಭಾರತದಲ್ಲಿ ಮೊಬೈಲ್ ಹೊಂದಿರುವ ಮಹಿಳೆಯರ ಪ್ರಮಾಣ 31% ಮಾತ್ರ : ಆಕ್ಸ್ಫಾಮ್ ವರದಿ
ಹೊಸದಿಲ್ಲಿ, ಡಿ. 5: 2021ರ ಕೊನೆಯ ವೇಳೆಗೆ, ಭಾರತದಲ್ಲಿ 61% ಪುರುಷರು ಮೊಬೈಲ್ ಫೋನ್ ಹೊಂದಿದ್ದರು, ಆದರೆ, ಮೊಬೈಲ್ ಹೊಂದಿದ್ದ ಮಹಿಳೆಯರ ಪ್ರಮಾಣ ಕೇವಲ 31% ಆಗಿತ್ತು ಎಂದು ಸರಕಾರೇತರ ಸಂಘಟನೆ ಆಕ್ಸ್ಫಾಮ್(Oxfam) ಸೋಮವಾರ ವರದಿಯೊಂದರಲ್ಲಿ ತಿಳಿಸಿದೆ.
ಮಹಿಳೆಯರಲ್ಲಿರುವ ಮಾಹಿತಿ ಕೊರತೆಯನ್ನು ನೀಗಿಸಲು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅವರ ಸಾಮರ್ಥ್ಯವನ್ನು ವೃದ್ಧಿಸಲು ಹಾಗೂ ಅವರು ಆರೋಗ್ಯ ಸೇವೆಗಳನ್ನು ಪಡೆಯಲು ಅವರು ಮೊಬೈಲ್ ಫೋನ್ ಗಳನ್ನು ಹೊಂದುವುದು ಅಗತ್ಯವಾಗಿದೆ ಎನ್ನುವುದನ್ನು ತನ್ನ ಸಂಶೋಧನೆ ತೋರಿಸಿದೆ ಎಂದು ದೇಶದಲ್ಲಿನ ಡಿಜಿಟಲ್ ಅಸಮಾನತೆ ಕುರಿತ ತನ್ನ ವರದಿಯಲ್ಲಿ ಆಕ್ಸ್ಫಾಮ್ ಇಂಡಿಯಾ ಹೇಳಿದೆ. ಇದಕ್ಕಾಗಿ ಅದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ ಅಂಶಗಳನ್ನು ಬಳಸಿಕೊಂಡಿದೆ.
ಭಾರತದಲ್ಲಿ ಇಂಟರ್ನೆಟ್ ಬಳಸುವವರ ಪೈಕಿ ಮೂರರಲ್ಲಿ ಒಬ್ಬರು ಮಹಿಳೆಯರಾಗಿದ್ದಾರೆ. ಏಶ್ಯಾ-ಪೆಸಿಫಿಕ್ ವಲಯದಲ್ಲೇ, ಭಾರತದಲ್ಲಿ ಇಂಟರ್ನೆಟ್ ಬಳಕೆಯಲ್ಲಿನ ಲಿಂಗ ತಾರತಮ್ಯ 40.4% ಆಗಿದೆ. ಭಾರತೀಯ ಮಹಿಳೆಯರು ಇಂಟರ್ನೆಟ್ ಬಳಸುವ ಪ್ರಮಾಣ ಪುರುಷರಿಗಿಂತ 33%ದಷ್ಟು ಕಡಿಮೆ ಎಂದು ವರದಿ ಹೇಳಿದೆ.