ಚಾಲನಾ ಪರವಾನಿಗೆ ನಕಲಿ ಎಂದು ಸಾಬೀತುಪಡಿಸುವುದು ವಿಮಾ ಕಂಪೆನಿ ಜವಾಬ್ದಾರಿ: ಹೈಕೋರ್ಟ್
ಬೆಂಗಳೂರು, ಡಿ.5: ಅಪಘಾತಕ್ಕೆ ಕಾರಣವಾದ ವಾಹನದ ಚಾಲಕ ಹೊಂದಿದ್ದ ಚಾಲನಾ ಪರವಾನಗಿ ನಕಲಿ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ವಿಮಾ ಕಂಪೆನಿಯ ಮೇಲಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದಶಕದ ಹಿಂದೆ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಗಾಯಗೊಂಡಿದ್ದ ತರುಣ್ ಗೌಡ ಎನ್ನುವವರಿಗೆ ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ವಿಮಾ ಕಂಪೆನಿಗೆ ವಹಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಕ್ರಮ ಪ್ರಶ್ನಿಸಿ ಯುನೈಟೆಡ್ ಇನ್ಶೂರೆನ್ಸ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಲೈಸೆನ್ಸ್ ನಕಲಿ ಎನ್ನುವುದು ಸಾಬೀತಾಗುವವರೆಗೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ವಾಹನದ ಮಾಲಕನ ಮೇಲೆ ಹೊರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2010ರ ಡಿ.26ರಂದು ಮಂಡ್ಯದ ಅಬಲವಾಡಿಯ ತನ್ನ ಮನೆಯ ಮುಂದೆ ನಿಂತಿದ್ದ ತರುಣ್ಗೆ ವೇಗವಾಗಿ ಬಂದ ಟಾಟಾ ಏಸ್ ಗಾಡಿ ಢಿಕ್ಕಿ ಹೊಡೆದಿತ್ತು. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಪರಿಹಾರ ಕೋರಿ ತರುಣ್ ಪರವಾಗಿ ಆತನ ತಂದೆ ಸಲ್ಲಿಸಿದ್ದ ಅರ್ಜಿಯನ್ನು 2014ರಲ್ಲಿ ಮಾನ್ಯ ಮಾಡಿದ್ದ ನ್ಯಾಯಾಧಿಕರಣ, ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ವಿಮಾ ಕಂಪೆನಿಗೆ ಹೊರಿಸಿತ್ತು.