ನೇಮಕಾತಿಗೆ ಆಗ್ರಹಿಸಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಆಕಾಂಕ್ಷಿಗಳಿಂದ ದಯಾಮರಣ ಕೋರಿ ಸಿಎಂಗೆ ಮನವಿ
ಹುಬ್ಬಳ್ಳಿ, ಡಿ. 5: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಖಾಲಿ ಇರುವ 2,692 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಹುಬ್ಬಳ್ಳಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಚೇರಿಗೆ ತೆರಳಿ ಉದ್ಯೋಗಾಕಾಂಕ್ಷಿಗಳು ಮನವಿ ಪತ್ರ ಸಲ್ಲಿಸಿದರು. ಒಂದು ವೇಳೆ ನೇಮಕಾತಿ ಪತ್ರ ನೀಡದಿದ್ದರೆ ದಯಾಮರಣಕ್ಕೆ ಅವಕಾಶ ನೀಡಲು ಉದ್ಯೋಗಾಕಾಂಕ್ಷಿಗಳು ಒತ್ತಾಯ ಮಾಡಿದ್ದಾರೆ.
ಆರೋಗ್ಯ ನಿರೀಕ್ಷಣಾಧಿಕಾರಿಗಳ ಉದ್ಯೋಗಾಕಾಂಕ್ಷಿಗಳ ಸಂಘದ ನೇತೃತ್ವದಲ್ಲಿ ಅನೇಕ ಬಾರಿ ಈಗಾಗಲೇ ಪ್ರತಿಭಟನೆ ನಡೆಸಲಾಗುತ್ತಿದ್ದು, ಹಲವಾರು ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆ ತಾಲೂಕು ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಮನವಿ ಸಹ ಸಲ್ಲಿಸಲಾಗಿತ್ತು.
ಆದರೆ, ಯಾವುದೇ ರೀತಿಯ ಪ್ರತಿಕ್ರಿಯೆ ಸರಿಯಾಗಿ ಬಾರದ ಕಾರಣ ಉದ್ಯೋಗ ನಿರೀಕ್ಷಣಾಧಿಕಾರಿಗಳ ಆಕಾಂಕ್ಷೆಗಳು ಅಸಮಾಧಾನಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಗೆ ಮನವಿ ಸಲ್ಲಿಸಿ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳ ಉದ್ಯೋಗಾಕಾಂಕ್ಷಿಗಳ ವಯೋಮಿತಿ ಸಹ ಮೀರುತ್ತಿದೆ. ಸರಕಾರ ಹಾಗೂ ಹಣಕಾಸು ಇಲಾಖೆಯ ವಿಳಂಬ ಧೋರಣೆಯಿಂದ ಬದುಕಿನಲ್ಲಿ ಅಭದ್ರತೆ ಹಾಗೂ ನಿರುದ್ಯೋಗ ಸಮಸ್ಯೆ ಉಂಟಾಗುತ್ತಿದೆ ಎಂದು ನೇತೃತ್ವ ವಹಿಸಿರುವ ಆರೋಗ್ಯ ನಿರೀಕ್ಷಣಾಧಿಕಾರಿಗಳ ಉದ್ಯೋಗ ಆಕಾಂಕ್ಷಿ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಅನೇಕ ಉದ್ಯೋಗಾಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿ, ಕಳೆದ ಏಳು ವರ್ಷಗಳಿಂದ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆ ಭರ್ತಿಯಾಗಿಲ್ಲ. ಇದರಿಂದ ನಮ್ಮ ವಿಭಾಗದ ಅಭ್ಯರ್ಥಿಗಳು ನಿರುದ್ಯೋಗ ಸಮಸ್ಯೆಯಿಂದ ಬಳಲುತಿದ್ದಾರೆ. ಇನ್ನು ಉದ್ಯೋಗ ಇಲ್ಲದೇ ಬಾರ್ ರೆಸ್ಟೋರೆಂಟ್, ಖಾಸಗಿ ಕಂಪೆನಿಯಲ್ಲಿ ಜೊತೆಗೆ ಹೊಟೇಲ್ ಮುಂತಾದ ಕಡೆಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಈಗ ಉದ್ಯೋಗ ಇಲ್ಲ ಇತ್ತ ಬೇರೆ ಕಡೆಗಳಲ್ಲಿ ಕೆಲಸ ಸಹ ಮಾಡಲು ಆಗುತಿಲ್ಲ ಎಂದು ಸಂಘದ ಮುಖಂಡ ಮಲ್ಲನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.