ಫಿಫಾ ವಿಶ್ವಕಪ್ : ಹದಿನಾರರ ಘಟ್ಟದ ಪಂದ್ಯದಲ್ಲಿ ಬ್ರೆಝಿಲ್‍ಗೆ ಭರ್ಜರಿ ಜಯ

ಹೊಸದಿಲ್ಲಿ: ಗೋಲುಗಳ ಸುರಿಮಳೆಗೈದ ಬ್ರೆಝಿಲ್ ಆಟಗಾರರು ಕತರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಹದಿನಾರರ ಘಟ್ಟದ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಕೊರಿಯಾ ತಂಡವನ್ನು 4-1 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ರಹದಾರಿ ಪಡೆದರು.
ಜಪಾನ್ ವಿರುದ್ಧ 3-1 ಪೆನಾಲ್ಟಿ ಅಂತರದಲ್ಲಿ ಗೆದ್ದ ಕ್ರೊವೇಶಿಯಾ ತಂಡ ಮುಂದಿನ ಸುತ್ತಿನಲ್ಲಿ ಬಲಿಷ್ಠ ಬ್ರೆಝಿಲ್ ಗೆ ಎದುರಾಳಿ.
ಕಳೆದ ವಿಶ್ವಕಪ್‍ನ ರನ್ನರ್ ಅಪ್ ತಂಡವಾದ ಕ್ರೊವೇಶಿಯಾ ಹಾಗೂ ಬ್ರೆಝಿಲ್ ನಡುವಿನ ಜಿದ್ದಾಜಿದ್ದಿ ಕಾಳಗ ಫುಟ್ಬಾಲ್ ಪ್ರಿಯರಿಗೆ ರಸದೌತಣವಾಗುವ ನಿರೀಕ್ಷೆ ಇದೆ. ಮಂಗಳವಾರದ ಪಂದ್ಯದ ಮೊದಲಾರ್ಧದಲ್ಲೇ ಬ್ರೆಝಿಲ್ 4-0 ಗೋಲುಗಳ ಮುನ್ನಡೆ ಸಾಧಿಸಿದ ಕಾರಣ ಫಲಿತಾಂಶ ಬಹುತೇಕ ನಿರ್ಧಾರವಾಗಿತ್ತು.
ನೇಮರ್ ತಮ್ಮ ವೃತ್ತಿಜೀವನದ 76ನೇ ಅಂತರರಾಷ್ಟ್ರೀಯ ಗೋಲು ಗಳಿಸುವ ಮುನ್ನ ಏಳನೇ ನಿಮಿಷದಲ್ಲಿ ವಿನಿಶಿಯಸ್ ಜ್ಯೂನಿಯರ್ ಬ್ರೆಝಿಲ್‍ನ ಗೋಲು ಖಾತೆ ತೆರೆದರು. ಫುಟ್ಬಾಲ್ ದಂತಕಥೆ ಪೀಲೆಯವರ 77 ಗೋಲುಗಳ ದಾಖಲೆ ಸರಿಗಟ್ಟಲು ನೇಮರ್‍ಗೆ ಕೇವಲ ಒಂದು ಗೋಲು ಅಗತ್ಯವಿದೆ. 13ನೇ ನಿಮಿಷದಲ್ಲಿ ನೇಮರ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ರಿಚರ್ಲಿಸನ್ 29ನೇ ನಿಮಿಷದಲ್ಲಿ ಮುನ್ನಡೆಯನ್ನು 3-0ಗೆ ಹಿಗ್ಗಿಸಿದರೆ, ಲೋಕಸ್ ಪಕ್ವೆಟಾ 36ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು.
ಆದರೆ ಎರಡನೇ ಅವಧಿಯಲ್ಲಿ ಕೊರಿಯಾ, ಬ್ರೆಝಿಲ್ ದಾಳಿಯನ್ನು ಕಟ್ಟಿಹಾಕಲು ಉತ್ತಮ ಕಾರ್ಯತಂತ್ರದೊಂದಿಗೆ ಮೈದಾನಕ್ಕೆ ಇಳಿಯಿತು. ಏಷ್ಯನ್ ತಂಡದ ನಿರಂತರ ಪ್ರಯತ್ನ 76ನೇ ನಿಮಿಷದಲ್ಲಿ ಫಲ ನೀಡಿತು. ಪೈಕ್ ಸ್ಯೂಂಗ್ ಹೊ, ಭಾರಿ ಅಂತರದಿಂದ ಅಚ್ಚರಿಯ ಗೋಲು ಗಳಿಸಿ ಗಮನ ಸೆಳೆದರು. ಆದರೆ ಆ ವೇಳೆಗಾಗಲೇ ಏಷ್ಯನ್ ತಂಡದ ಅವಕಾಶದ ಬಾಗಿಲು ಮುಚ್ಚಿತ್ತು.
ವಿಶ್ವದ ಅತಿದುಬಾರಿ ಆಟಗಾರ ಎನಿಸಿದ ನೇಮರ್, ಕಾಲುನೋವಿನ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಸೆರ್ಬಿಯಾ ವಿರುದ್ಧ 2-0 ಗೋಲುಗಳಿಂದ ಗೆದ್ದ ಮೊದಲ ಪಂದ್ಯದಲ್ಲಿ ನೇಮರ್ ಗಾಯಗೊಂಡಿದ್ದರು.
— FIFA World Cup (@FIFAWorldCup) December 5, 2022