ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯ: ಸಿಎಫ್‍ಟಿಎಫ್‍ಕೆ
ತೆರಿಗೆ ಹೆಚ್ಚಳಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಮನವಿ
ಬೆಂಗಳೂರು, ಡಿ.6: ಮುಂಬರುವ 2023-24ರ ಕೇಂದ್ರ ಬಜೆಟ್‍ನಲ್ಲಿ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿಎಫ್‍ಟಿಎಫ್‍ಕೆ ಒತ್ತಾಯಿಸಿದೆ.
ಅಲ್ಲದೆ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕದ ಎಲ್ಲ ಸಂಸತ್ ಸದಸ್ಯರಿಗೂ ಪತ್ರ ಬರೆಯಲಾಗಿದೆ.
ಕ್ಯಾನ್ಸರ್ ತಡೆಗಟ್ಟುವಿಕೆ, ಯುವಜನ ರಕ್ಷಣೆ ಮತ್ತು ತಂಬಾಕು ನಿಯಂತ್ರಣಕ್ಕಾಗಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವ ತಂಬಾಕು ಮುಕ್ತ ಕರ್ನಾಟಕ ವೇದಿಕೆ (ಸಿಎಫ್‍ಟಿಎಫ್‍ಕೆ) ಮತ್ತು ಕರ್ನಾಟಕ ನೋ ಫಾರ್ ಟೊಬ್ಯಾಕೊ (ಕೆಎನ್‍ಓಟಿ)ಸಂಸ್ಥೆಗಳ ಪ್ರಕಾರ, ತಂಬಾಕು ಕಂಪೆನಿಗಳ ಪ್ರಮುಖ ಗುರಿಯಾಗಿರುವ ಯುವಜನರಿಗೆ ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ.
ತಂಬಾಕು ಉತ್ಪನ್ನಗಳ ಬೆಲೆ ಭಾರತದಲ್ಲೇ ಅತೀ ಕಡಿಮೆಯಾಗಿದ್ದು, ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ವರದಿ ಶಿಫಾರಸು ಮಾಡಿದೆ. ಏಕೆಂದರೆ, ತೆರಿಗೆ ಹೆಚ್ಚಳ ಕೇವಲ ತಂಬಾಕು ಬಳಕೆಯ ಸುಲಭ ಪ್ರಾರಂಭವನ್ನು ತಡೆಯುವುದು ಮಾತ್ರವಲ್ಲ, ತೆರಿಗೆಯಾಗಿ ಉತ್ಪತ್ತಿಯಾಗುವ ಹೆಚ್ಚುವರಿ ಆದಾಯವನ್ನು ಕ್ಯಾನ್ಸರ್ ತಡೆಗಟ್ಟುವ ಕಾರ್ಯಕ್ರಮಗಳಿಗೆ ಬಳಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಂದು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಸಂಚಾಲಕ ಎಸ್.ಜೆ.ಚಂದರ್ ಹೇಳಿದರು.