ಅಂಬೇಡ್ಕರ್ ಆವಾಸ್ ಮನೆ ನಿರ್ಮಾಣಕ್ಕೆ 7 ಲಕ್ಷ ರೂ. ಸಹಾಯಧನ ನೀಡುವಂತೆ ಆಗ್ರಹಿಸಿ ಧರಣಿ

ಬ್ರಹ್ಮಾವರ, ಡಿ.6: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅಂಬೇಡ್ಕರ್ ಆವಾಸ್ ಮನೆ ನಿರ್ಮಾಣಕ್ಕಾಗಿ ಕನಿಷ್ಟ 7 ಲಕ್ಷ ರೂ. ಸಹಾಯಧನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿ ಕೂಡಲೇ ಅನುಷ್ಠಾನಗೊಳಿಸಲು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬ್ರಹ್ಮಾವರದಲ್ಲಿ ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತುನಾಡಿದ ಪಕ್ಷದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಸರ್ವರಿಗೂ ಸೂರು ಗುಡಿಸಲು ರಹಿತ ಮನೆ ಎಂಬ ಧ್ಯೇಯ ವಾಕ್ಯದೊಂದಿಗೆ ಅಧಿಕಾರ ಬಂದ ಸರಕಾರ ಈವರೆಗೆ ಬಡವರಿಗೆ ಮನೆ ನಿರ್ಮಿಸಿಕೊಟ್ಟಿಲ್ಲ. ಆರ್ಥಿಕವಾಗಿ ಬಡವರಾಗಿರುವ ಎಸ್‌ಸಿಎಸ್‌ಟಿ ಜನಾಂಗದವರು ಸುಸಜ್ಜಿತವಾದ ಮನೆ ಇಲ್ಲದೆ ಟಾರ್ಪಾಲು, ಮುಳಿಹುಲ್ಲು ಹಾಗೂ ಮುರುಕುಲು ಗುಡಿಸಲಿ ನಲ್ಲಿ ಹಿನಾಯ ಸ್ಥಿತಿಯಲ್ಲಿ ವಾಸಿಸುತ್ತಿರುವುದು ವಿಪರ್ಯಾಸ ಎಂದರು.
ಇತ್ತೀಚೆಗೆ ಮರಳು, ಹಂಚು, ಮರ, ಸಿಮೆಂಟ್, ಕಬ್ಬಿಣ ಇತ್ಯಾದಿಗಳಿಗೆ ಕಟ್ಟಡ ಸಾಮಗ್ರಿಗಳ ಬೆಲೆ 5 ಪಟ್ಟಾಗಿದ್ದು, 600ಚ.ಮೀ. ಮನೆಗೆ ಕನಿಷ್ಟ 9ಲಕ್ಷ ರೂ. ವೆಚ್ಚವಾಗುತ್ತದೆ. ಇದರಿಂದ ಬಡವರಿಗೆ ಸ್ವಂತ ಮನೆ ಕನಸಿನ ಮಾತೆ ಆಗಿದೆ. ಅಂದು ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಂಬೇಡ್ಕರ್ ಆವಾಸ್ ಮನೆ ನಿರ್ಮಾಣಕ್ಕಾಗಿ 7 ಲಕ್ಷ ನೀಡುವುದಾಗಿ ಪ್ರಸ್ತಾವನೆ ಸಲ್ಲಿಸಿ ಘೋಷಿಣೆವ ಮಾಡಿದ್ದರು. ಆದರೆ ಅದು ಈವರೆಗೆ ಕಾರ್ಯ ಗತವಾಗಿಲ್ಲ ಎಂದು ಅವರು ದೂರಿದರು.
ಮನೆ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿರುವ ಇಂದು ಎಸ್‌ಸಿಎಸ್‌ಟಿ ಸಮುದಾಯದವರು ಇಂದಿಗೂ ಪ್ರತಿದಿನ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದುದರಿಂದ ಅಂಬೇಡ್ಕರ್ ಆವಾಸ್ ಮನೆ ನಿರ್ಮಾಣ ಕ್ಕಾಗಿ 7 ಲಕ್ಷ ಸಹಾಯಧನ ನೀಡುವುದಾಗಿ ಅಧೀಕೃತವಾಗಿ ಘೋಷಿಸಿ ಶೀಘ್ರ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಗ್ರಾಪಂಗೆ ಆದೇಶ ನೀಡುವುದರ ಮೂಲಕ ಶೋಷಿತ ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಈ ಕುರಿತ ಮನವಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ಬ್ರಹ್ಮಾವರ ಆಶ್ರಯ ಹೊಟೇಲ್ ನಿಂದ ಆರಂಭಗೊಂಡ ಮೆರವಣಿಗೆಯು ಆಕಾಶವಾಣಿ ಮಾರ್ಗವಾಗಿ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.
ಧರಣಿಯಲ್ಲಿ ಸಮತಾ ಸೈನಿಕ ದಳದ ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಡೂರು, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಪಕ್ಷದ ಬ್ರಹ್ಮಾವರ ತಾಲೂಕು ಅಧ್ಯಕ್ಷ ಪ್ರಕಾಶ್ ಹೇರೂರು, ಕಾರ್ಕಳ ತಾಲೂಕು ಅಧ್ಯಕ್ಷ ಗಫೂರ್ ಕಾರ್ಕಳ, ಸಮತಾ ಸೈನಿಕ ದಳದ ಕಾರ್ಕಳ ತಾಲೂಕು ಅಧ್ಯಕ್ಷ ಗಜೇಂದ್ರ, ಕುಂದಾಪುರ ತಾಲೂಕು ಅಧ್ಯಕ್ಷ ಸುದೇಶ್, ಹೆಬ್ರಿ ತಾಲೂಕು ಅಧ್ಯಕ್ಷ ಸತೀಶ್ ಜನ್ನಾಡಿ, ಜಿಲ್ಲಾ ಕೋಶಾಧಿಕಾರಿ ಮಂಜುನಾಥ್ ಮಧುವನ್ ಮೊದಲಾದವರು ಉಪಸ್ಥಿತರಿದ್ದರು.







