ಲಂಚಕ್ಕೆ ಬೇಡಿಕೆಯಿಟ್ಟು, ಪಡೆಯದಿದ್ದರೆ ಭ್ರಷ್ಟಾಚಾರವಲ್ಲ: ಹೈಕೋರ್ಟ್

ಬೆಂಗಳೂರು, ಡಿ.6: ಸರಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರೂ ಅದನ್ನು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಕೇಸ್ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ (High Court of Karnataka) ಅಭಿಪ್ರಾಯಪಟ್ಟಿದೆ.
ಹೊಸದುರ್ಗದ ಡಿ.ಹೆಚ್.ಗುರುಪ್ರಸಾದ್ ಅವರಿಗೆ ಸಹಕಾರ ಸಂಘದಿಂದ 14 ಲಕ್ಷ ರೂ.ಸಾಲ ಮಂಜೂರಾಗಿತ್ತು. ಇದಕ್ಕೆ ಭದ್ರತೆಗಾಗಿ ತಮಗೆ ಸೇರಿದ ಸ್ಥಿರಾಸ್ತಿಯನ್ನು ಅಡಮಾನ ಕ್ರಯವಾಗಿ ನೋಂದಣಿ ಮಾಡಿಕೊಡಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ನೋಂದಣಿಯಾಗಿತ್ತು.
ನಂತರ ಗುರುಪ್ರಸಾದ್ ಅವರು ಎಸಿಬಿಗೆ ದೂರು ನೀಡಿ, ಅಡಮಾನ ಕ್ರಯ ನೋಂದಣಿ ಮಾಡಿಕೊಡಲು ಚಿತ್ರದುರ್ಗದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ವಿಭಾಗದಲ್ಲಿಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಅವರು ಐದು ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದರು.
ಕೇಸ್‍ನಲ್ಲಿ ಹಣವನ್ನು ದೂರುದಾರರು, ಮಂಜುನಾಥ್ ಟೇಬಲ್ ಮೇಲಿಟ್ಟಿದ್ದಾರೆ. ಇನ್ನೂ ಟೇಬಲ್ ಮೇಲೆ ಹಣ ಪತ್ತೆಯಾಗಿದೆ ಎಂಬ ಆಧಾರದ ಮೇಲೆ ತನಿಖಾಧಿಕಾರಿಗಳು, ಹಣ ಸ್ವೀಕರಿಸಿದ ಆರೋಪದಲ್ಲಿ ಮಂಜುನಾಥ್ ಅವರನ್ನು ದೋಷಿಯನ್ನಾಗಿಸಿದ್ದಾರೆ. ಆದರೆ, 2022ರ ಫೆ.24ರಂದು ಅಡಮಾನ ಕ್ರಯ ನೋಂದಣಿ ಮಾಡಿದ್ದು, ಅಂದೇ ದಾಖಲೆ ಕಳುಹಿಸಿಕೊಡಲಾಗಿದೆ.
ನಂತರ ಮಂಜುನಾಥ್ ಮುಂದೆ ಯವುದೇ ಕೆಲಸ ಬಾಕಿಯಿರಲಿಲ್ಲ. ಇದಾದ 15 ದಿನಗಳ ನಂತರ ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಕೇಸ್ ಮುಂದುವರಿಸಿದರೆ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಮಂಜುನಾಥ್ ವಿರುದ್ಧದ ದೂರು ರದ್ದುಪಡಿಸಿದೆ.







