ಪ್ರವರ್ಗ 2(ಎ)ಗೆ ಸೇರಿಸಲು ಒತ್ತಾಯಿಸಿ ಕ್ಷತ್ರಿಯ ಮರಾಠ ಸಮಾಜ ಪ್ರತಿಭಟನೆ

ಉಡುಪಿ, ಡಿ.7: ಬೆಂಗಳೂರಿನ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಅಧ್ಯಕ್ಷ ಕೆ. ಸುರೇಶ ರಾವ್ ಸಾಠೆ ಅವರ ಸೂಚನೆಯಂತೆ ಕ್ಷತ್ರಿಯ ಮರಾಠ ಸಮಾಜವನ್ನು ಪ್ರವರ್ಗ 3(ಬಿ) ಯಿಂದ 2(ಎ )ಗೆ ಸೇರಿಸುವಂತೆ ಒತ್ತಾಯಿಸಿ ಜಿಲ್ಲೆಯಲ್ಲೂ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಕೆ.ಕೆ.ಎಂ.ಪಿ. ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್ ನೇತೃತ್ವ ದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಲಹೆಗಾರ ಕೇಶವ ರಾವ್ ಮಾನೆ ಮಾತನಾಡಿ, ಇಲ್ಲಿಯವರೆಗೆ ಬಂದ ಎಲ್ಲಾ ಸರಕಾರಗಳು ಕ್ಷತ್ರಿಯ ಮರಾಠರಿಗೆ ಯಾವುದೇ ಸವಲತ್ತುಗಳನ್ನು ಕೊಡದೇ, ಕೇವಲ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಮತ್ತು ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದೆ ಎಂದರು.
ಕಾರ್ಕಳ ತಾಲೂಕು ಅಧ್ಯಕ್ಷ ಕೆ ಬಿ ಕೀರ್ತನ್ ಕುಮಾರ್ ಲಾಡ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನಮ್ಮನ್ನು 3(ಬಿ) ಯಿಂದ 2(ಎ) ಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ ಇದಕ್ಕೆ ಸರಕಾರ ಸ್ಪಂದಿಸದೇ ಇರುವುದರಿಂದ ವಿದ್ಯಾಭ್ಯಾಸ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಹೀಗಾಗಿ ಸರಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಇನ್ನು ಮುಂದಾದರೂ ಮರಾಠ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಕಾಶ್ ರಾವ್ ಕವಡೆ ಮಾತನಾಡಿ, ಮರಾಠ ಸಮಾಜದವರು ಸರಕಾರಿ ಸವಲತ್ತುಗಳು ಇಲ್ಲದೆ ಕೂಲಿ, ಡ್ರೈವರ್ ಹಾಗೂ ಇನ್ನಿತರ ಅಸಂಘಟಿತ ವಲಯಗಳಲ್ಲಿ ಕೆಲಸಗಳನ್ನು ಮಾಡಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸರಕಾರಿ ಉದ್ಯೋಗ, ರಾಜಕೀಯ ಮೀಸಲಾತಿ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳಿಂದ ಮರಾಠ ಸಮುದಾಯ ವಂಚಿತವಾಗಿದೆ. ಇನ್ನು ಮುಂದಾದರೂ ಕ್ಷತ್ರಿಯ ಮರಾಠರನ್ನು (2ಎ) ಗೆ ಸೇರಿಸಿ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್ ಮನವಿಯನ್ನು ಸ್ವೀಕರಿಸಿದರು. ಹಾಗೂ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಯಿತು.








