ವಕೀಲರ ಮೇಲಿನ ದೌರ್ಜನ್ಯ ಆರೋಪ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ

ಮಂಗಳೂರು: ಯುವ ವಕೀಲ ಕುಲದೀಪ್ ಮೇಲೆ ಪುಂಜಾಲಕಟ್ಟೆ ಠಾಣಾ ಪೊಲೀಸರು ದೌರ್ಜನ್ಯ ಎಸಗಿದ್ದಾ ರೆಂದು ಆರೋಪಿಸಿ ಪ್ರತಿಭಟನೆ ನಡೆಸಿರುವ ಮಂಗಳೂರು ವಕೀಲರ ಸಂಘ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದೆ.
ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ಮಂಗಳೂರಿನ ನ್ಯಾಯಾಲಯಗಳ ಸಂಕೀರ್ಣದ ಎದುರು ಬುಧವಾರ ದಂದು ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಅವರು, ದೌರ್ಜನ್ಯವೆಸಗಿದ ಪೊಲೀಸ್ ಅಧಿಕಾರಿ, ಸಿಬಂದಿಯನ್ನು 24 ಗಂಟೆಗಳೊಳಗೆ ಅಮಾನತು ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ವಕೀಲರು ಸೇರಿ ತೀವ್ರ ಹೋರಾಟ ನಡೆಸಲಿದ್ದಾರೆ. ಕಾನೂನು ರೀತಿಯ ಕ್ರಮಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಸಾಮಾನ್ಯವಾದ ದೂರಿಗೆ ಸಂಬಂಧಿಸಿ ಪೊಲೀಸರು ರಾತ್ರೋ ರಾತ್ರಿ ವಕೀಲ ಕುಲದೀಪ್ ಅವರ ಮನೆಗೆ ನುಗ್ಗಿ ಮೈಮೇಲೆ ಬಟ್ಟೆಯೂ ಇಲ್ಲದ ಸ್ಥಿತಿಯಲ್ಲಿ ಅವರನ್ನು ಎಳೆದುಕೊಂಡು ಬಂದಿದ್ದಾರೆ. ಅವರ ತಂದೆ ತಾಯಿಗೆ ಬೆದರಿಕೆ ಹಾಕಿದ್ದಾರೆ. ಕುಲದೀಪ್ ಅವರನ್ನು 20 ಗಂಟೆಗಿಂತಲೂ ಹೆಚ್ಚು ಸಮಯ ಠಾಣೆಯಲ್ಲಿರಿಸಿಕೊಂಡಿದ್ದರು. ವಕೀಲನ ಮೇಲೆಯೇ ಈ ರೀತಿ ದೌರ್ಜನ್ಯವಾದರೆ ಇನ್ನು, ಸಾಮಾನ್ಯ ಜನರ ಸ್ಥಿತಿಯೇನು ಎಂದು ಶ್ರೀಧರ ಎಣ್ಮಕಜೆ ಪ್ರಶ್ನಿಸಿದರು.
ರಾಜ್ಯದಾದ್ಯಂತ ಎಲ್ಲ ವಕೀಲರ ಸಂಘಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ೨೪ ಗಂಟೆಗಳೊಳಗೆ ತಪ್ಪಿತಸ್ಥರನ್ನು ಅಮಾನತುಗೊಳಿಸದಿದ್ದರೆ ಎಲ್ಲ ವಕೀಲ ಸಂಘಗಳ ಪದಾಧಿಕಾರಿಗಳು ಕೂಡ ಮಂಗಳೂರಿಗೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವಕೀಲರು, ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಕೆ, ಖಜಾಂಚಿ ಶಶಿರಾಜ್ ರಾವ್ ಕಾವೂರು, ಮಾಜಿ ಅಧ್ಯಕ್ಷರಾದ ಎಸ್.ಪಿ ಚೆಂಗಪ್ಪ, ಅಶೋಕ್ ಅರಿಗ, ಹಿರಿಯ ನ್ಯಾಯವಾದಿ ಪರಮೇಶ್ವರ ಜೋಯಿಸ್ ಮೊದಲಾದವರು ಪಾಲ್ಗೊಂಡಿದ್ದರು.