ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ವಲ್ಪ ಸಮಯ ತಮ್ಮ ನಂ. 1 ಸ್ಥಾನ ಕಳೆದುಕೊಂಡ ಎಲಾನ್ ಮಸ್ಕ್
ಕ್ಯಾಲಿಫೋರ್ನಿಯಾ: ಟ್ವಿಟರ್ ನ (Twitter) ನೂತನ ಬಾಸ್ ಹಾಗೂ ಟೆಸ್ಲಾ ಮೋಟಾರ್ಸ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರು ಬುಧವಾರ ತಮ್ಮ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಕೆಲ ಕ್ಷಣಗಳ ಕಾಲ ಕಳೆದುಕೊಂಡರು. ಈ ಸಂದರ್ಭ ಮಸ್ಕ್ ಅವರ ಸ್ಥಾನ Louis Vuitton ಸಿಇಒ ಬೆರ್ನಾರ್ಡ್ ಆರ್ನಾಲ್ಟ್ (Bernard Arnault) ಅವರ ಪಾಲಾಗಿತ್ತು. ಆರ್ನಾಲ್ಟ್ ಅವರ ಒಟ್ಟು ಸಂಪತ್ತಿನ ಮೌಲ್ಯ 185.8 ಬಿಲಿಯನ್ ಡಾಲರ್ಗೆ ಅಂದರೆ ಮಸ್ಕ್ ಅವರ ಸಂಪತ್ತಿಗಿಂತ ಸುಮಾರು 400 ಮಿಲಿಯನ್ ಡಾಲರ್ನಷ್ಟು ಏರಿಕೆಯಾಗಿದ್ದೇ ಇದಕ್ಕೆ ಕಾರಣವಾಗಿತ್ತು ಎಂದು ಫೋಬ್ರ್ಸ್ ಹೇಳಿದೆ.
ಟ್ವಿಟರ್ ಖರೀದಿಯಿಂದಾಗಿ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ ಇಳಿಕೆಗೆ ಕಾರಣವಾಗಿತ್ತು. ಮಸ್ಕ್ ಅವರು ಟ್ವಿಟರ್ ಗೆ 44 ಬಿಲಿಯನ್ ಡಾಲರ್ ಹೂಡಿಕೆ ಮಾಡಬೇಕಾಗಿದ್ದರಿಂದ ಹಾಗೂ ನಂತರದ ಬೆಳವಣಿಗೆಗಳಿಂದಾಗಿ ಅವರ ಒಟ್ಟು ಸಂಪತ್ತು 200 ಬಿಲಿಯನ್ ಡಾಲರ್ಗಿಂತ ಕೆಳಗಿಳಿದಿತ್ತು.
ಬುಧವಾರ ಅಲ್ಪ ಕಾಲ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ನಂ. 1 ಸ್ಥಾನ ಕಳೆದುಕೊಂಡಿದ್ದ ಮಸ್ಕ್ ನಂತರ ಅದನ್ನು ಮತ್ತೆ ತಮ್ಮದಾಗಿಸಿಕೊಂಡರು.