ಕಳೆದ 5 ವರ್ಷಗಳಲ್ಲಿ ಪ್ರಧಾನಿಯ ವಿದೇಶ ಪ್ರವಾಸಗಳ ವೆಚ್ಚ ರೂ. 239 ಕೋಟಿ : ರಾಜ್ಯಸಭೆಗೆ ತಿಳಿಸಿದ ಕೇಂದ್ರ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಳೆದ ಐದು ವರ್ಷಗಳಲ್ಲಿ ಕೈಗೊಂಡ ವಿದೇಶ ಪ್ರವಾಸಗಳ ಖರ್ಚುವೆಚ್ಚಗಳ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ ಮುರಳೀಧರನ್ ಗುರುವಾರ ರಾಜ್ಯಸಭೆಗೆ ನೀಡಿದ್ದಾರೆ. ಈ ಮಾಹಿತಿಯಂತೆ ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯ ವಿದೇಶ ಭೇಟಿಗಳಿಗೆ ತಗಲಿದೆ ವೆಚ್ಚ ಸುಮಾರು ರೂ. 239 ಕೋಟಿ ಆಗಿದೆ.
ಐದು ವರ್ಷಗಳಲ್ಲಿ ಪ್ರಧಾನಿಯ ಒಟ್ಟು 36 ಪ್ರವಾಸಗಳ ಕುರಿತು ಮಾಹಿತಿ ನೀಡಲಾಗಿದ್ದು ಇದರಲ್ಲಿ ಒಂಬತ್ತು ಪ್ರವಾಸಗಳ ವೇಳೆ ಅವರು ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು.
ಜಿ20 ಶೃಂಗಸಭೆಗಾಗಿ ಪ್ರಧಾನಿ ಇತ್ತೀಚೆಗೆ ಇಂಡೊನೇಷ್ಯಾಗೆ ನೀಡಿದ ಭೇಟಿಯ ಖರ್ಚು ರೂ. 32,09,760 ಆಗಿದೆ ಎಂದು ತಿಳಿಸಿದ ಸಚಿವರು, ಸೆಪ್ಟೆಂಬರ್ 26 ರಿಂದ 28 ರ ತನಕ ಪ್ರಧಾನಿಯ ಜಪಾನ್ ಭೇಟಿಯ ಖರ್ಚು ರೂ. 23,86,536 ಆಗಿದೆ ಎಂದರು.
ಇದಕ್ಕೂ ಮೊದಲು ಈ ವರ್ಷ ಪ್ರಧಾನಿ ಯುರೋಪ್‌ಗೆ ಭೇಟಿ ನೀಡಿದ್ದು ಈ ಪ್ರಯಾಣದ ವೆಚ್ಚ ರೂ 2,15,61,304 ಆಗಿದೆ. ತರುವಾಯ 2019 ರ ಸೆಪ್ಟೆಂಬರ್ 21 ರಿಂದ 28ರ ತನಕ ಪ್ರಧಾನಿ ಕೈಗೊಂಡ ಅಮೆರಿಕಾ ಪ್ರವಾಸದ ವೆಚ್ಚ ರೂ. 23,27,09,000 ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಧಾನಿಯ ವಿದೇಶ ಭೇಟಿಗಳಲ್ಲಿ ಅವರು 2019 ರ ಸೆಪ್ಟೆಂಬರ್ 21 ರಿಂದ 28ರ ತನಕ ಕೈಗೊಂಡ ಅಮೆರಿಕಾ ಭೇಟಿಗೆ ಗರಿಷ್ಠ ವೆಚ್ಚವಾಗಿದ್ದರೆ ಈ ವರ್ಷದ ಜಪಾನ್ ಭೇಟಿಗೆ ತಗಲಿದ ವೆಚ್ಚ ಕನಿಷ್ಠವಾಗಿತ್ತು.
ಸಚಿವರು ಪ್ರಧಾನಿಯ ಒಟ್ಟು 31 ವಿದೇಶ ಪ್ರವಾಸಗಳ ಖರ್ಚುವೆಚ್ಚಗಳ ವಿವರ ನೀಡಿದ್ದು ಒಟ್ಟು ಖರ್ಚು ರೂ 239,04,08,625 ಆಗಿದೆ.







