ವಿಧಾನಸೌಧದ ಆವರಣದಲ್ಲೇ ಸರಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ: ಕಾಂಗ್ರೆಸ್ ಟೀಕೆ
ಬೆಂಗಳೂರು, ಡಿ. 9: ರಾಜ್ಯದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿದ್ದು, ವಿಧಾನಸೌಧದ ಆವರಣದಲ್ಲೇ ಸರ್ಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಿಧಾನಸೌಧ ವ್ಯಾಪಾರಸೌಧವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ. ವಿಧಾನಸೌಧದ ಆವರಣದಲ್ಲೇ ಸರಕಾರಿ ಹುದ್ದೆ ಮಾರಾಟ ಮಾಡಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಅವರೇ, ವಿಧಾನಸೌಧದಲ್ಲೇ ರಾಜಾರೋಷವಾಗಿ ಹುದ್ದೆ ಮಾರಾಟ ನಡೆಯುತ್ತಿದ್ದರೂ ತಮ್ಮ ‘ಪ್ರಾಮಾಣಿಕ ಸರಕಾರ'ದ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಮಾರಾಟದ ಏಜೆಂಟರನ್ನು ನೀವೇ ಸಾಕಿಕೊಂಡಿದ್ದೀರಾ?’ ಎಂದು ವಾಗ್ದಾಳಿ ನಡೆಸಿದೆ.
'ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಮ್ಯಾನೇಜರ್ ಹುದ್ದೆಗೆ 65 ಲಕ್ಷ! ಬಿಜೆಪಿ ಸರಕಾರ ಪ್ರಾಮಾಣಿಕವಾಗಿದ್ದರೆ ವಿಧಾನಸೌಧದ ಆವರಣದಲ್ಲೇ ಭ್ರಷ್ಟರಿಗೆ ಹುದ್ದೆ ಮಾರಾಟ ಮಾಡುವ ಧೈರ್ಯ ಬರಲು ಹೇಗೆ ಸಾಧ್ಯ. ಕೌಶಲ್ಯಾಭಿವೃದ್ಧಿ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಕ್ಯಾಶಲ್ಲೇ ಅಭಿವೃದ್ಧಿಯಾಗಲು ಈ ಪಟಾಲಂನ್ನು ಮುಂದೆ ಬಿಟ್ಟಿದ್ದಾರೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಸುಲಿಗೆ ಸರಕಾರ ಆಡಳಿತದಲ್ಲಿ ಇರುವಾಗ ಭ್ರಷ್ಟ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದಾಗಿದೆ. ವಿಧಾನಸೌಧದಿಂದ ಹಿಡಿದು ಹಾದಿ ಬೀದಿಯಲ್ಲೂ ಲಂಚಾವತಾರ ಸರಾಗವಾಗಿ ಸಾಗಿದೆ. ಲಂಚ ಪಡೆಯುವ ವೇಳೆ ಮಾಧ್ಯಮಗಳನ್ನು ಕಂಡು ಓಡುತ್ತಿರುವ ಈ ಆರ್ ಟಿಒ ಅಧಿಕಾರಿ ಬಿಜೆಪಿ ಸರಕಾರವನ್ನು ಪ್ರತಿನಿಧಿಸುತ್ತಿದ್ದಾನೆ!’ ಎಂದು ಕಾಂಗ್ರೆಸ್ ಟೀಕಿಸಿದೆ.