ಟಿಕೆಟ್ ನೀಡುವ ವೇಳೆ ಹೊಸಬರಿಗೆ ಆದ್ಯತೆ: ಡಿ.ಕೆ.ಶಿವಕುಮಾರ್
"ನಮ್ಮ ರಾಜಕೀಯ ತಂತ್ರಗಳನ್ನು ಒಂದೇ ದಿನದಲ್ಲಿ ಹೇಳಲು ಸಾಧ್ಯವಿಲ್ಲ"
ಬೆಂಗಳೂರು, ಡಿ. 9: ಹಿಮಾಚಲ ಪ್ರದೇಶ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಗುಜರಾತಿನಲ್ಲಿ ಹೆಚ್ಚಿನ ಕ್ಷೇತ್ರಗಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅಲ್ಲಿಯೂ ಆಪರೇಶನ್ ಕಮಲ ಮಾಡಿ ಚುನಾವಣೆ ಮಾಡಿದ್ದರು. ಹಿಮಾಚಲ ಪ್ರದೇಶ ಚುನಾವಣೆಯು ಭ್ರಷ್ಟಾಚಾರ ಹೆಚ್ಚು ದಿನ ನಡೆಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಮ್ಮ ನಾಯಕರೆಲ್ಲರೂ ಅಲ್ಲಿ ಉತ್ತಮ ಪ್ರಚಾರ ಮಾಡಿದ್ದಾರೆ. ಅಲ್ಲಿನ ಮತದಾರರು ಒಬ್ಬೊಬ್ಬರಿಗೆ ಒಂದೊಂದು ಬಾರಿ ಅವಕಾಶ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಹಿಮಾಚಲ ಪ್ರದೇಶದಲ್ಲಿ ಆಪರೇಷನ್ ಕಮಲ ನಡೆಸುವ ಬಗ್ಗೆ ಬಿಜೆಪಿ ಪ್ರಯತ್ನಿಸಲಿ, ಅವರಿಗೆ ಶುಭಕೋರುತ್ತೇನೆ’ ಎಂದು ಹೇಳಿದ ಅವರು, ರಾಜ್ಯ ಚುನಾವಣೆ ವೇಳೆ ಮೋದಿ ನಿತ್ಯ ಇಲ್ಲೇ ಪ್ರಚಾರ ಮಾಡಲಿ. ಅವರು ತಾರಾ ಪ್ರಚಾರಕರಾಗಿದ್ದು, ಇಲ್ಲೇ ವಾಸ್ತವ್ಯ ಹೂಡಲಿ. ಅವರು ಪ್ರಧಾನಿಯಾಗಿದ್ದು ತಮ್ಮ ಸ್ಥಾನಕ್ಕೆ ನೀಡಬೇಕಾದ ಗೌರವ ನೀಡೋಣ. ಕಳೆದ ಬಾರಿ ಶೇ.10ರಷ್ಟು ಸರಕಾರ ಎಂದು ಹೇಳಿದ್ದರು, ಈಗ ಅವರ ಸರಕಾರ ಶೇ.40ರಷ್ಟು ಆಗಿದೆ’ ಎಂದು ತಿರುಗೇಟು ನೀಡಿದರು.
ಹೊಸಬರಿಗೆ ಆದ್ಯತೆ: ‘ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುವ ರೀತಿ ನಾವು ಟಿಕೆಟ್ ನೀಡುತ್ತೇವೆ. ಯಾರು ಯಾವ ಬಂಡಾಯ ಬೇಕಾದರೂ ಏಳಲಿ. ಪ್ರತಿಯೊಬ್ಬರ ಅರ್ಹತೆ ಮೇಲೆ ನಿರ್ಧರಿಸುತ್ತೇವೆ. ಉದಯಪುರ ನಿರ್ಣಯದಂತೆ ಹೊಸಬರಿಗೆ ಆದ್ಯತೆ ನೀಡುವ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆ ಹೊಂದಿದ್ದು, ಅವರು ಆರಂಭದ ದಿನಗಳಲ್ಲೇ ಈ ನಿರ್ಣಯದ ಬಗ್ಗೆ ದೇಶದ ಜನರಿಗೆ ತಿಳಿಸಿದ್ದಾರೆ. ನಮ್ಮ ರಾಜಕೀಯ ತಂತ್ರಗಳನ್ನು ಒಂದೇ ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸುಲಭವಲ್ಲ: ದಿನದಲ್ಲಿ ಕೇವಲ 24 ಗಂಟೆ ಮಾತ್ರ ಇದೆ. ಇನ್ನು ಹೆಚ್ಚಾಗಿದ್ದರೆ ಇನ್ನು ಹೆಚ್ಚಾಗಿ ದುಡಿಯಬಹುದಾಗಿತ್ತು. ನಮ್ಮ ಮುಂದಿರುವ ಸವಾಲಿನ ಬಗ್ಗೆ ಪರಮೇಶ್ವರ್ ಅವರಿಗೂ ಗೊತ್ತಿದೆ. ಎಲ್ಲವೂ ಸುಲಭವಾಗಿ ಸಿಗುವುದಿಲ್ಲ. ಬಿಜೆಪಿ ಅವರದು ಡಬಲ್ ಇಂಜಿನ್ ಸರಕಾರ, ಅವರು ಸಾವಿಧಾನಿಕ ಸಂಸ್ಥೆಗಳು, ಸರಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
‘ಗುತ್ತಿಗೆದಾರರು, ಪೊಲೀಸ್ ಅಧಿಕಾರಿಗಳು, ರೌಡಿಗಳು ಹೀಗೆ ಅನೇಕರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜವಾಬ್ದಾರಿ ಕಂಡು ಡಾ.ಪರಮೇಶ್ವರ್ ಅನುಕಂಪದಿಂದ ಈ ರೀತಿ ಹೇಳಿದ್ದಾರೆ. ಇಲ್ಲಿ ನಾವು ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು. ನಾವು ಒಬ್ಬರೆ ಹೋಗುವುದಾದರೆ ವೇಗವಾಗಿ ಹೋಗಬಹುದು, ನಾವು ದೂರದವರೆಗೂ ಹೋಗಬೇಕಾದರೆ ನಾವು ಎಲ್ಲರ ಜತೆಗೂಡಿ ಸಾಗಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ’ ಎಂದರು.
ಟಿಕೆಟ್‍ಗೆ 1,350 ಮಂದಿ ಅರ್ಜಿ: ‘ಎಲ್ಲರ ಜತೆ ಮಾತನಾಡಿದ್ದೇನೆ. ಪಕ್ಷ ಇದ್ದರೆ ಅಧಿಕಾರ ಅನುಭವಿಸಬಹುದು. ಪಕ್ಷ ಅಧಿಕಾರಕ್ಕೆ ಬಂದರೆ ನಾವು ಅಧಿಕಾರ ಅನುಭವಿಸಬಹುದು. 350ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಅಧಿಕಾರ ಇದೆ. 75 ಪರಿಷತ್ ಸ್ಥಾನ, 16 ರಾಜ್ಯಸಭಾ ಸ್ಥಾನಗಳಿದ್ದು, ಅರ್ಹತೆಗೆ ತಕ್ಕಂತೆ ಎಲ್ಲರಿಗೂ ನಾವು ಅಧಿಕಾರ ನೀಡುತ್ತೇವೆ. ನಮ್ಮ ಪಕ್ಷದಲ್ಲಿ ಶಾಸಕರಾಗಬೇಕು ಎಂದು ಬಹಳ ಹುರುಪಿನಿಂದ 1,350 ಜನ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ದಟ್ಟವಾಗಿದೆ’ ಎಂದರು.
ಕೆ.ಎಚ್.ರಂಗನಾಥ್‍ರಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ನಮ್ಮ ಪಕ್ಷವನ್ನು ಕಷ್ಟದ ಸಮಯದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಅವರು ದಲಿತರು ಎಂಬುದಕ್ಕಿಂತ ಅವರು ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಂದು ಸ್ಥಾನ ಕೊಟ್ಟಿದೆ. ಇದು ಕಾಂಗ್ರೆಸ್ ಇತಿಹಾಸ. ಬೇರೆ ಪಕ್ಷಗಳಲ್ಲಿ ಇಂತಹ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ದಲಿತ ಸಿಎಂ ಏಕೆ ಆಗಬಾರದು: ‘ರಾಜ್ಯದಲ್ಲಿ ದಲಿತ ವ್ಯಕ್ತಿ ಏಕೆ ಸಿಎಂ ಆಗಬಾರದು. ನಾನು ಬೇರೆಯವರಂತೆ ಮುಸ್ಲಿಮರನ್ನು ಸಿಎಂ ಮಾಡುತ್ತೇನೆ, ದಲಿತರನ್ನು ಮಾಡುತ್ತೇನೆಂದು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಸಿಎಂ ಆಗುವ ಅವಕಾಶವಿದೆ. ಅವರಿಗೆ ಅರ್ಹತೆ ಹಾಗೂ ಹಿರಿತನ ಎರಡೂ ಇದೆ. ಅವರು ಪಕ್ಷಕ್ಕೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮ ಮನೆ ಆಸ್ತಿ ಅಲ್ಲ. ಇದು ಎಲ್ಲ ವರ್ಗದವರಿಗೂ ಸೇರಿರುವ ಪಕ್ಷ. ಇದೇ ನಮ್ಮ ಪಕ್ಷದ ಶಕ್ತಿ.’
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ