ಕಲಬುರಗಿ: ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಮಾಜಿ ಸಚಿವ ರೇವೂನಾಯ್ಕ್ ಬೆಳಮಗಿ
ಕಲಬುರಗಿ, ಡಿ.9: ಕಲಬುರಗಿ ಜಿಲ್ಲೆಯಲ್ಲಿ ಬಂಜಾರ ಸಮುದಾಯದ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ರೇವೂನಾಯ್ಕ್ ಬೆಳಮಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೇವೂನಾಯಕ್ ಬೆಳಮಗಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿ ಕೆಲಸ ಮಾಡಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ, ಜೆಡಿಎಸ್ ಸೇರ್ಪಡೆಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದರು.
ಚುನಾವಣೆ ಬಳಿಕ ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ತಟಸ್ಥವಾಗಿ ಉಳಿದಿದ್ದ ರೇವೂನಾಯಕ್ ಬೆಳಮಗಿ, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ಕನೀಝ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.