ಫಲಿಮಾರು ಅಣೆಕಟ್ಟು ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ

ಪಡುಬಿದ್ರಿ: ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಪ್ಪು ನೀರು ತಡೆ ಅಣೆಕಟ್ಟೆ ಅವೈಜ್ಞಾನಿಕ ಕಾಮಗಾರಿ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಆಗಿರುವ ಸಮಸ್ಯೆಯ ಬಗ್ಗೆ ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಕಾಪು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಮೂಡುಪಲಿಮಾರು ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದರು.
ಅಣೆಕಟ್ಟೆ ಸಹಿತ ಮುಳುಗಡೆ ಸ್ಥಳಗಳನ್ನು ವೀಕ್ಷಿಸಿ ಸ್ಥಳೀಯರಿಂದ ತಹಸೀಲ್ದಾರ್ ಮಾಹಿತಿ ಪಡೆದರು. ಅಣೆಕಟ್ಟೆ ಪ್ರದೇಶದಲ್ಲಿನ ಅಸಮರ್ಪಕ ಕಾಮಗಾರಿ ಹಾಗೂ ಈ ಹಿಂದಿದ್ದ ತೋಡುಗಳ ಅಸಮರ್ಪಕ ನಿರ್ವಹಣೆಯಿಂದ ತೊಂದರೆಗಳಾಗುತ್ತಿದೆ. ಈ ಪ್ರದೇಶದಲ್ಲಿ ಇದ್ದ ಕಿಂಡಿ ಅಣೆಕಟ್ಟೆಗಳು ನಾದುರಸ್ತಿಯಲ್ಲಿವೆ. ಎರಡು ಕಿಂಡಿ ಅಣೆಕಟ್ಟೆ ಗಳ ಅವಶ್ಯಕತೆಯಿದ್ದು, ಅದನ್ನು ನಿರ್ಮಿಸಿ ನೀರು ನಿರ್ವಹಣೆಗೆ ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ರಾಯೇಶ್ ಪೈ ತಹಸೀಲ್ದಾರ್ ಗಮನಕ್ಕೆ ತಂದರು.
ನೀರು ನಿಂತ ಪರಿಣಾಮ ಜಲಜೀವನ್ ಮಿಷನ್ ಯೋಜನೆಗಾಗಿ ನಿರ್ಮಿಸಿರುವ ಬಾವಿ ಮಲಿನವಾಗುವ ಭೀತಿ ಯಿದೆ. ಇದು ಪಲಿಮಾರು ಗ್ರಾಮಕ್ಕೆ ಸಮಸ್ಯೆ ತಂದೊಡ್ಡಲಿದೆ ಎಂದು ದೂರಿದರು. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಸಹಿತ ಸಣ್ಣ ನೀರಾವರಿ ಇಲಾಖೆ ಗಮನಕ್ಕೂ ತರುವುದಾಗಿ ತಿಳಿಸಿದರು.
ಗ್ರಾಮಸ್ಥರ ಮನವಿ: ಫಲಿಮಾರು ಶಾಂಭವಿ ನದಿಯ ಅಣೆಕಟ್ಟು ಸಮಸ್ಯೆಯನ್ನು ಪರಿಹರಿಸುವಂತೆ ಮೂಡುಪಲಿ ಮಾರು ಆಗ್ರಹಿಸಿ ಗ್ರಾಮಸ್ಥರು ಪಲಿಮಾರು ಗ್ರಾಮ ಪಂಚಾಯಿತಿ ಮನವಿ ಸಲ್ಲಿಸಿದರು.
ಅಣೆಕಟ್ಟೆ ಭಾಗದಲ್ಲಿ 150 ಎಕರೆ ಕೃಷಿಭೂಮಿ ಮುಳುಗಡೆಯಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ತೊಂದರೆ ಯಾಗಿದೆ. ಬೆಳೆದ ತರಕಾರಿ ಸಹಿತ ಫಸಲು ನೀರಿನಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಅಣೆಕಟ್ಟೆ ಹಲಗೆ ಮಟ್ಟ ಏರಿಕೆ ಮಾಡಿದ ಪರಿಣಾಮ ಮೂಡು ಪಲಿಮಾರು ಭಾಗದಲ್ಲಿ ಪ್ರತೀ ವರ್ಷ ಸಮಸ್ಯೆಗಳಾಗುತ್ತಿವೆ. ಜಾನುವಾರುಗಳಿಗೆ ಮೇವಿಲ್ಲದಾಗಿದೆ. ಕುಡಿಯುವ ನೀರಿನ ಬಾವಿಗಳೆಲ್ಲ ಮಲಿನಗೊಂಡಿವೆ, ಎಲ್ಲೆಡೆ ನೀರು ನಿಂತು ಮಲಿನಗೊಂಡು ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ನೀರು ತುಂಬಿ ಮುಳುಗಡೆಯಾಗಿರುವ ಪ್ರದೇಶದಲ್ಲಿ ಮಕ್ಕಳು. ಜಾನುವಾರುಗಳು ತೆರಳಿದರೆ ಅನಾಹುತ ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ದೂರಿದರು.
ಅಧಿಕಾರಿಗಳು ಸಮಸ್ಯೆ ಗಂಭೀರತೆಯನ್ನು ಅರಿತು ಪರಿಹರಿಸದಿದ್ದಲ್ಲಿ ಅಣೆಕಟ್ಟೆ ಭಾಗದ ಪ್ರದೇಶವನ್ನು ಸಂಪೂರ್ಣ ಮುಳುಗಡೆ ಪ್ರದೇಶವೆಂದು ಘೋಷಿಸಬೇಕು. ಇದೇ ರೀತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಮುಂಭಾಗ ನಿರಂತರ ಧರಣಿ ನಡೆಸಲಾಗುವುದು ಎಂದು ಕೃಷಿಕ ದೀಪಕ್ ಪೈ ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಡಿ ಪ್ರಭು, ಪಿಡಿಒ ಪಿ.ಶಶಿಧರ್ ಹಾಗೂ ಗ್ರಾಮ ಕರಣಿಕೆ ಸುನಿಲ್ ಅವರಿಗೆ ಶುಕ್ರವಾರ ಮನವಿ ಸ್ವೀಕರಿಸಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪಿಡಿಒ, ಮೂಡು ಪಲಿಮಾರು ಹಾಗೂ ಹೊಯಿಗೆ ಭಾಗಕ್ಕೆ ಅಣೆಕಟ್ಟೆಯಿಂದ ಸಮಸ್ಯೆಗಳಾಗುತ್ತಿದ್ದು. ಸಂಬಂಧಿಸಿದ ಇಲಾಖೆ ಗಮನಕ್ಕೆ ತರುವುದಾಗಿ ತಿಳಿಸಿದರು.
ಗ್ರಾಪಂ ಸದಸ್ಯರಾದ ರಾಯೇಶ್ ಪೈ, ಪ್ರಿಯಾ ಶೆಟ್ಟಿ, ಮಾಜಿ ಅಧ್ಯಕ್ಷೆ ಮಾಲತಿ ದಿವಾಕರ್, ಹರೀಶ್ ಶೆಟ್ಟಿ ನಂದಿಮನೆ, ಸುಜಾತ, ಮೀನಾಕ್ಷಿ, ಜಯಲಕ್ಷ್ಮೀ, ಹೇಮಲತಾ, ಮಲ್ಲಿಕಾ ದೇವಾಡಿಗ, ಸುರೇಶ್ ಶೆಟ್ಟಿ, ಸುರೇಂದ್ರ ದೇವಾಡಿಗ, ಲೀಲಾಧರ ದೇವಾಡಿಗ, ಪ್ರವೀಣ್ ರೈ, ದೇವಸಾಸ್ ಮೂಡು ಪಲಿಮಾರು, ನಾರಾಯಣ ದೇವಾಡಿಗ, ಗಣೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.