ಖತರ್ ವಿಶ್ವಕಪ್: ವರದಿ ಮಾಡುವಾಗ ಕುಸಿದು ಬಿದ್ದು ಅಮೆರಿಕದ ಕ್ರೀಡಾ ವರದಿಗಾರ ಮೃತ್ಯು

ದೋಹಾ: ಖತರ್ ವಿಶ್ವಕಪ್‌ನಲ್ಲಿ ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಸುದ್ದಿಯಾಗಿದ್ದ ಅಮೆರಿಕದ ಪ್ರಮುಖ ಕ್ರೀಡಾ ವರದಿಗಾರರೊಬ್ಬರು ಶುಕ್ರವಾರ ದೋಹಾದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ವರದಿ ಮಾಡುವಾಗ ಕುಸಿದು ಬಿದ್ದು ನಿಧನರಾದರು ಎಂದು ಅಮೆರಿಕದ ಸಾಕರ್ ಫೆಡರೇಶನ್ ತಿಳಿಸಿದೆ. ವರದಿಗಾರನ ಪತ್ನಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
48ರ ಹರೆಯದ ಗ್ರಾಂಟ್ ವಾಲ್ Grant Wahl ಅವರು ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್‌ನಲ್ಲಿ, ನಂತರ ಸಿಬಿಎಸ್ ಸ್ಪೋರ್ಟ್ಸ್‌ನಲ್ಲಿ ದಶಕಗಳ ಕಾಲ ವರದಿಗಾರಿಕೆ ಮಾಡುವ ಮೂಲಕ ಅಮೆರಿಕದಲ್ಲಿ ಫುಟ್ಬಾಲ್ ಜನಪ್ರಿಯತೆ ಹೆಚ್ಚಾಗಲು ನೆರವಾಗಿದ್ದರು.
ಎನ್‌ಪಿಆರ್ ಪ್ರಕಾರ, ಶುಕ್ರವಾರದ ಅರ್ಜೆಂಟೀನ-ನೆದರ್‌ಲ್ಯಾಂಡ್ಸ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವು ಮುಕ್ತಾಯಗೊಳ್ಳುತ್ತಿದ್ದಂತೆ ಗ್ರಾಂಟ್ ವಾಲ್ ಅವರು ಪ್ರೆಸ್ ಟ್ರಿಬ್ಯೂನ್‌ನಲ್ಲಿ ಕುಸಿದುಬಿದ್ದರು.
ಅವರನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ಯುವ ಮೊದಲು ಪ್ಯಾರಾಮೆಡಿಕ್ಸ್ ಘಟನಾ ಸ್ಥಳದಲ್ಲಿ ಸಿಪಿಆರ್ ಮಾಡಿದರು. ಗ್ರಾಂಟ್ ವಾಲ್ ಅವರು ಹೃದಯಾಘಾತದಿಂದ ಬಳಲುತ್ತಿದ್ದರು ಎಂದು Wall Street Journal ತಿಳಿಸಿದೆ.
"ಗ್ರ್ಯಾಂಟ್ ಅವರು ಸಾಕರ್ ಅನ್ನು ತನ್ನ ಜೀವನದ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ ಹಾಗೂ ಅವರ ಅದ್ಭುತ ಬರವಣಿಗೆ ಇನ್ನು ಮುಂದೆ ನಮ್ಮೊಂದಿಗೆ ಇರುವುದಿಲ್ಲ ಎಂದು ನಾವು ತುಂಬಾ ದುಃಖಿತರಾಗಿದ್ದೇವೆ" ಎಂದು ಅಮೆರಿಕದ ಸಾಕರ್ ಫೆಡರೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಂಟ್ ವಾಲ್ ಅವರ ಪತ್ನಿ ಸೆಲೀನ್ ಗೌಂಡರ್, ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಮತ್ತು ಸಾಂಕ್ರಾಮಿಕ ರೋಗಗಳ ಪರಿಣಿತರಾಗಿದ್ದು, "ನಾನು ಸಂಪೂರ್ಣ ಆಘಾತದಲ್ಲಿದ್ದೇನೆ’’ ಎಂದು ಟ್ವೀಟಿಸಿದ್ದಾರೆ.