ಮಂಗಳೂರು | ಸಂತ ಅಲೋಶಿಯಸ್ ಪ.ಪೂ. ಕಾಲೇಜು ವಾರ್ಷಿಕೋತ್ಸವ

ಮಂಗಳೂರು, ಡಿ.10: ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ 143ನೇ ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ನೇವಲ್ ಎನ್ ಸಿ ಸಿ, ಉಡುಪಿ ಇಲ್ಲಿನ ಕಮಾಂಡರ್ ಕಾರ್ತಿಕ್ ದಾಸ್ ಭಾಗವಹಿಸಿ ಮಾತನಾಡಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ನಾನು ಈ ದೇಶವನ್ನು ಪ್ರತಿನಿಧಿಸುತ್ತಿರುವುದು ಸೌಭಾಗ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಸಂಸ್ಥೆಗಳ ವರಿಷ್ಠರಾದ ರೆ.ಫಾ. ಮೆಲ್ವಿನ್ ಪಿಂಟೊ ವಹಿಸಿದ್ದರು. ಕಾಲೇಜಿನ ವಿತ್ತಾಧಿಕಾರಿ ರೆ.ಫಾ.ಪ್ರದೀಪ್ ಸಿಕ್ವೇರಾ ಭಾಗವಹಿಸಿದ್ದರು.
ಈ ಸಮಾರಂಭದ ವೇಳೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಉನ್ನತ ಸಾಧನೆ ಗೈದ ಕಾಲೇಜಿನ ವಿದ್ಯಾರ್ಥಿಗಳಾದ ರೆಕ್ಸಾನ್ ನೊರೆನ್ಹಾ, ರಿಶಲ್ ರೋಶ್ನಿ ಮೊಂತೇರೋ ಇವರನ್ನು ಅಭಿನಂದಿಸಲಾಯಿತು. ಜೊತೆಗೆ ಕಳೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ರಾಷ್ಟ್ರ- ರಾಜ್ಯಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಕ್ಲಿಫರ್ಡ್ ಸಿಕ್ವೇರಾ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾಲೇಜಿನ ಉಪ ಪ್ರಾಂಶುಪಾಲೆ ಶಾಲೆಟ್ ಡಿಸೋಜ ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಡೀನ್ ಡಾ. ಪ್ರದೀಪ್ ಎಮ್, ಕಿರಣ್ ಶೆಟ್ಟಿ, ಕಾರ್ಯಕ್ರಮದ ಸಂಯೋಜಕಿ ಪ್ರೀತಮ್ ಶೆಟ್ಟಿ ಹಾಗೂ ಕಾಲೇಜಿನ ವಿದ್ಯಾರ್ಥಿ ಮಂಡಲದ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮುರಳಿ ಕೃಷ್ಣ ಜಿ.ಎಂ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಮಂಡಲದ ಅಧ್ಯಕ್ಷ ಹರ್ಷ್ ಪೊನ್ನಪ್ಪ ವಂದಿಸಿದರು. ಸಭಾಕಾರ್ಯಕ್ರಮದ ತರುವಾಯ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಮಾಹಿತ್ ಆಳ್ವ, ವಿಭಾಲಿ ಶೆಟ್ಟಿ, ಶ್ರೇಯ ದಾಸ್, ಅರೋಮಾ ಕಾರ್ಯಕ್ರಮ ನಿರೂಪಿಸಿದರು.
