ಮೀಸಲಾತಿ ಹೆಚ್ಚಳದ ರಾಜ್ಯ ಬಿಜೆಪಿ ನಾಯಕರ ಪ್ರಚಾರದ ಬಲೂನ್ ಗೆ ಕೇಂದ್ರ ಸರ್ಕಾರವೇ ಸೂಜಿ ಚುಚ್ಚಿದೆ: ಸಿದ್ದರಾಮಯ್ಯ
ಬೆಂಗಳೂರು, ಡಿ.10: 'ಮೀಸಲಾತಿ ಪ್ರಮಾಣವನ್ನು 50%ಕ್ಕಿಂತ ಹೆಚ್ಚಿಸುವ ಪ್ರಸ್ತಾಪ ಇಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ಸಚಿವರೇ ಹೇಳುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ರಾಜ್ಯ ಬಿಜೆಪಿ ನಾಯಕರ ಪ್ರಚಾರದ ಬಲೂನ್ ಗೆ ಕೇಂದ್ರ ಸರ್ಕಾರವೇ ಸೂಜಿ ಚುಚ್ಚಿದೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ''ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರ ಹಿಂದೆ ಇದ್ದದ್ದು ಆ ಸಮುದಾಯದ ಬಗೆಗಿನ ಕಾಳಜಿ ಅಲ್ಲ, ಅದು ರಾಜಕೀಯ ಲಾಭದ ದುರುದ್ದೇಶ ಮಾತ್ರ ಎನ್ನುವುದನ್ನು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಕೇಂದ್ರ ಸರ್ಕಾರವೇ ರಾಜ್ಯ ಬಿಜೆಪಿಯ ಬಣ್ಣ ಬಯಲು ಮಾಡಿದೆ'' ಎಂದು ಲೇವಡಿ ಮಾಡಿದ್ದಾರೆ.
''ಶೇಕಡಾ 50ರ ಒಟ್ಟು ಮೀಸಲಾತಿ ಪ್ರಮಾಣದ ಮಿತಿಯನ್ನು ಕಿತ್ತುಹಾಕದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೇಗೆ ಹೆಚ್ಚಿಸಲು ಸಾಧ್ಯ? ಕೆಲವರನ್ನು ಕೆಲವು ಕಾಲ ಮರುಳು ಮಾಡಬಹುದು, ಎಲ್ಲರನ್ನೂ ಎಲ್ಲ ಕಾಲದಲ್ಲಿಯೂ ಮರುಳು ಮಾಡಲು ಸಾಧ್ಯವಿಲ್ಲ'' ಎಂದು ಕಿಡಿಕಾರಿದ್ದಾರೆ.
''ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದರಿಂದ ರಾಜ್ಯದ ಸರ್ಕಾರ ಮೊದಲು ಇದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸಬೇಕಿತ್ತು. ಈ ಕರ್ತವ್ಯದಲ್ಲಿ ರಾಜ್ಯ ಸರ್ಕಾರ ಸೋತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಪರಿಶಿಷ್ಟ ಜಾತಿ ಮತ್ತು ಪಂಗಡದ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾದ ಕಾಳಜಿ ಇದ್ದಿದ್ದರೆ ತಕ್ಷಣ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮೀಸಲಾತಿ ಹೆಚ್ಚಳಕ್ಕೆ ಕೈಗೊಳ್ಳಬೇಕಾಗಿರುವ ಉಪಕ್ರಮಗಳ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಶುರುಮಾಡುವಂತೆ ಮನವರಿಕೆ ಮಾಡಿಕೊಡಬೇಕು. ಮತ್ತೆ ಯಾವ ಕರ್ಮಕ್ಕೆ ಡಬಲ್ ಎಂಜಿನ್ ಸರ್ಕಾರ?'' ಎಂದು ಪ್ರಶ್ನೆ ಮಾಡಿದ್ದಾರೆ.
''ಪ್ರಧಾನ ಮಂತ್ರಿಯವರ ಜೊತೆ ಮಾತನಾಡುವ ಧೈರ್ಯ ಇಲ್ಲದೇ ಇದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲಿ, ಮೀಸಲಾತಿ ಹೆಚ್ಚಳದ ಅವಶ್ಯಕತೆ ಬಗ್ಗೆ ನಾವು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಇದನ್ನು ಬಿಟ್ಟು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಬಣ್ಣ ಬಯಲು ಮಾಡಿಕೊಳ್ಳಬೇಡಿ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ @narendramodi ಯವರ ಜೊತೆ ಮಾತನಾಡುವ ಧೈರ್ಯ ಇಲ್ಲದೆ ಇದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲಿ, ಮೀಸಲಾತಿ ಹೆಚ್ಚಳದ ಅವಶ್ಯಕತೆ ಬಗ್ಗೆ ನಾವು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಇದನ್ನು ಬಿಟ್ಟು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಬಣ್ಣ ಬಯಲು ಮಾಡಿಕೊಳ್ಳಬೇಡಿ @BJP4Karnataka.
— Siddaramaiah (@siddaramaiah) December 10, 2022
6/6#SocialJustice
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರ ಹಿಂದೆ ಇದ್ದದ್ದು ಆ ಸಮುದಾಯದ ಬಗೆಗಿನ ಕಾಳಜಿ ಅಲ್ಲ, ಅದು ರಾಜಕೀಯ ಲಾಭದ ದುರುದ್ದೇಶ ಮಾತ್ರ ಎನ್ನುವುದನ್ನು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಕೇಂದ್ರ @BJP4India ಸರ್ಕಾರವೇ ರಾಜ್ಯ @BJP4Karnataka ಅವರ ಬಣ್ಣ ಬಯಲು ಮಾಡಿದೆ.
— Siddaramaiah (@siddaramaiah) December 10, 2022
2/6#SocialJustice pic.twitter.com/Z7yDPyMFVi