ಕೇಂದ್ರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಮಹಾ ಮೋರ್ಚಾ ನಡೆಸಲಿರುವ ಆರೆಸ್ಸೆಸ್ ಅಂಗಸಂಸ್ಥೆ ಬಿಎಂಎಸ್

ನಾಗ್ಪುರ್: ಆರೆಸ್ಸೆಸ್ (RSS) ಸಂಯೋಜಿತ ಸಂಘಟನೆಯಾಗಿರುವ ಭಾರತೀಯ ಮಜ್ದೂರ್ (BMS) ಇದರ ವಿದರ್ಭ ಪ್ರದೇಶ ಘಟಕವು ಡಿಸೆಂಬರ್ 28 ರಂದು ಕೇಂದ್ರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಹಾಗೂ ಕಾರ್ಮಿಕರ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಮಯಲದಲಿ ವಿಧಾನ ಭವನಕ್ಕೆ ಪ್ರತಿಭಟನಾ ಮೆರವಣಿಗೆ (ಮಹಾ ಮೋರ್ಚ) ನಡೆಸಲಿದೆ.
ಬಿಎಂಎಸ್ ನ ವಿದರ್ಭ ಪ್ರದೇಶ ಘಟಕದ ಅಧ್ಯಕ್ಷ ಶಿಲ್ಪಾ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಗಜಾನನ ಗಟ್ಲೇವಾರ್ ಮತ್ತಿತರ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾರ್ವಜನಿಕ ರಂಗದ ಉದ್ದಿಮೆಗಳನ್ನು ದೊಡ್ಡ ಮಟ್ಟದಲ್ಲಿ ಕೇಂದ್ರ ಸರಕಾರ ಖಾಸಗೀಕರಣಗೊಳಿಸುತ್ತಿದೆ ಮತ್ತು ಗುತ್ತಿಗೆ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ ಬಿಎಂಎಸ್, ಡಿಸೆಂಬರ್ 28 ರಂದು ನಡೆಯುವ ಮಹಾ ಮೋರ್ಚಾದಲ್ಲಿ 20,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.
ಬಿಎಂಎಸ್ ಸ್ಥಾಪಕ ದತ್ತೋಪಂತ್ ತೆಂಗಡಿ ಅವರ ಹುಟ್ಟೂರಾದ ವಾರ್ಧಾದ ಆರ್ವಿ ಎಂಬಲ್ಲಿಂದ ಮಹಾ ಮೋರ್ಚಾ ಡಿಸೆಂಬರ್ 12 ರಂದು ಆರಂಭಗೊಂಡು 11 ವಿದರ್ಭ ಜಿಲ್ಲೆಗಳನ್ನು ದಾಟಿ ಡಿಸೆಂಬರ್ 28 ರಂದು ಸಂಪನ್ನಗೊಳ್ಳಲಿದೆ.
ನಾಗ್ಪುರ್, ಚಂದ್ರಾಪುರ್, ಗಡ್ಚಿರೋಲಿ, ಗೊಂಡಿಯಾ, ಭಂಡಾರ, ವಾರ್ಧಾ, ಅಮರಾವತಿ, ಯಾವತ್ಮಾಲ್, ಅಕೋಲ, ಬುಲ್ದಾನ ಮತ್ತು ವಾಶಿಂ ಜಿಲ್ಲೆಗಳ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಎಂಎಸ್ ತಿಳಿಸಿದೆ.







